ದೇಶವಿದೇಶ

ಪ್ಯಾರಾ ಏಷ್ಯನ್ ಗೇಮ್ಸ್: ಚಿಕ್ಕಮಗಳೂರಿನ ರಕ್ಷಿತ ರಾಜುಗೆ ಚಿನ್ನ, ರಾಧಾ ವೆಂಕಟೇಶ್‍ಗೆ ಬೆಳ್ಳಿ

ಜಕಾರ್ತ (ಅ.09): ಮೂರನೇ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಸೋಮವಾರ ಕರ್ನಾಟಕದ ಯುವ ಓಟಗಾರ್ತಿ ರಕ್ಷಿತಾ ರಾಜು ಚಿನ್ನದ ಸಾಧನೆ ಮಾಡಿದ್ದಾರೆ. ಸೋಮವಾರ ಜಾವೆಲಿನ್ ಪಟು ಸಂದೀಪ್ ಚೌಧರಿ ಮತ್ತು ಸುಯಶ್ ಜಾಧವ್ ಚಿನ್ನ ಗಳಿಸಿದ್ದಾರೆ.

ಕೂಟ ದಲ್ಲಿ 3 ಚಿನ್ನ, 6 ಬೆಳ್ಳಿ, 8 ಕಂಚಿನೊಂದಿಗೆ ಭಾರತ 17 ಪದಕ ಜಯಿಸಿದೆ. ಮಹಿಳೆಯರ 1500 ಮೀ. ಟಿ-11 ಓಟದ ಸ್ಪರ್ಧೆ ಯಲ್ಲಿ ಚಿಕ್ಕಮಗಳೂರಿನ ರಕ್ಷಿತಾ 05:49.64 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದರು. ಆರಂಭದಿಂದಲೂ ಉತ್ತಮ ಮುನ್ನಡೆ ಕಾಯ್ದು ಕೊಂಡ ರಕ್ಷಿತಾ, ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನ ಜಯಿಸಿದರು.

ಮಹಿಳೆಯರ 1500 ಮೀ. ಟಿ12/13 ಕೆಟಗರಿಯ ಓಟದ ಸ್ಪರ್ಧೆಯಲ್ಲಿ ರಾಜ್ಯದ ಚಿಕ್ಕಮಗಳೂರಿನ ಓಟಗಾರ್ತಿ ರಾಧಾ ವೆಂಕಟೇಶ್ 5:17.65 ಸೆ.ಗಳಲ್ಲಿ ಗುರಿ ಪೂರ್ಣಗೊಳಿಸಿ ಬೆಳ್ಳಿ ಗೆದ್ದರು.

ದೀಪಾ ಮಲಿಕ್‌ಗೆ ಕಂಚು :

ಭಾರತದ ತಾರಾ ಜಾವೆಲಿನ್ ಪಟು ದೀಪಾ ಮಲಿಕ್ ಕಂಚಿನ ಪದಕ ಜಯಿಸಿದ್ದಾರೆ. ಮಹಿಳೆಯರ ಎಫ್‌ 53/54 ಕೆಟಗರಿಯ ಜಾವೆಲಿನ್ ಸ್ಪರ್ಧೆಯಲ್ಲಿ ದೀಪಾ ಮಲಿಕ್ ಕಂಚಿನ ಸಾಧನೆ ಮಾಡಿದರು. ಪುರುಷರ ಜಾವೆಲಿನ್ ಸ್ಪರ್ಧೆಯ ಎಫ್ 42-44/61-64 ಕೆಟಗರಿಯ ಫೈನಲ್ ಸ್ಪರ್ಧೆಯಲ್ಲಿ ಸಂದೀಪ್ 3ನೇ ಪ್ರಯತ್ನದಲ್ಲಿ 60.01 ಮೀ. ದೂರ ಎಸೆಯುವ ಮೂಲಕ ಚಿನ್ನ ಜಯಿಸಿದರು.

ಇದೇ ಸ್ಪರ್ಧೆಯಲ್ಲಿ ಶ್ರೀಲಂಕಾದ ಚಮಿಂದಾ ಸಂಪತ್ ಹೆಟ್ಟಿ 59.32 ಮೀ. ಮತ್ತು ಇರಾನ್‌ನ ಒಮಿದಿ ಅಲಿ 58.97 ಮೀ. ದೂರ ಎಸೆಯುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. ಮಹಿಳೆಯರ ಜಾವೆಲಿನ್ ಎಫ್-46 ಸ್ಪರ್ಧೆಯಲ್ಲಿ ರಮ್ಯಾ ನಾಗರಾನೈ 31.51 ಮೀ. ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಜಯಿಸಿದರು.

ಪುರುಷರ 50 ಮೀ. ಬಟರ್‌ಫ್ಲೈ ಎಸ್-7 ಸ್ಪರ್ಧೆಯಲ್ಲಿ ಸುಯಶ್ ಜಾಧವ್ 0:32.71 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಜಯಿಸಿದರು. ಫೈನಲ್ ಸ್ಪರ್ಧೆಯಲ್ಲಿ ಇತರೆ ರಾಷ್ಟ್ರಗಳ ಸ್ಪರ್ಧಿಗಳಿಂದ ತೀವ್ರ ಪೈಪೋಟಿ ಎದುರಿಸಿದ ಜಾಧವ್ ಅಂತಿಮವಾಗಿ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದರು.

ಮೊದಲ ದಿನದ ಸ್ಪರ್ಧೆಯಲ್ಲಿ ಸುಯಶ್ 200 ಮೀ. ವೈಯಕ್ತಿಕ ಮೆಡ್ಲೆ ಎಸ್‌ಎಮ್-7 ಕೆಟಗರಿಯಲ್ಲಿ ಕಂಚಿನ ಪದಕ ಗೆದ್ದರು. ಮಹಿಳೆಯರ 100 ಮೀ. ಫ್ರೀ ಸ್ಟ್ರೈಲ್‌ನಲ್ಲಿ ದೇವಾನ್ಶಿ ಸತಿಜ್ವಾನ್ 1:14.37 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.

ಭಾನುವಾರ ತಡರಾತ್ರಿ ನಡೆದ ಈಜು ಸ್ಪರ್ಧೆಯಲ್ಲಿ ಭಾರತದ ಮಹಿಳಾ ಈಜುಪಟು ದೇವಾನ್ಶಿ ಸತಿಜ್ವಾನ್ 100 ಮೀ. ಬಟರ್‌ಫ್ಲೈ ಎಸ್ -10 ಕೆಟಗರಿಯಲ್ಲಿ ಬೆಳ್ಳಿ ಪದಕ ಗೆದ್ದರು. ಪುರುಷರ 100 ಮೀ. ಫ್ರೀ ಸ್ಟೈಲ್ ಎಸ್-10 ಸ್ಪರ್ಧೆಯಲ್ಲಿ ಸ್ವಪ್ನಿಲ್ ಪಟೇಲ್ 59.77 ಸೆ.ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. (ಎನ್.ಬಿ)

Leave a Reply

comments

Related Articles

error: