ಕರ್ನಾಟಕಪ್ರಮುಖ ಸುದ್ದಿ

ಮಡಿಕೇರಿ ದಸರಾಗೆ ಈ ಬಾರಿ ಸರ್ಕಾರದಿಂದ ನೆರವು

ಮಡಿಕೇರಿ (ಅ.09): ಮೈಸೂರು ದಸರಾಕ್ಕೆ ಯಾವ ರೀತಿಯ ಇತಿಹಾಸವಿದೆಯೋ ಅದೇ ರೀತಿ ಮಡಿಕೇರಿ ದಸರಾಗೂ ತನ್ನದೇ ಆದ ಇತಿಹಾಸವಿದೆ. ಈ ಬಾರಿ ಮಹಾಮಳೆ ಮತ್ತು ಭೂಕುಸಿತದಿಂದ ತತ್ತರಿಸಿರುವ ಮಡಿಕೇರಿಯಲ್ಲಿ ದಸರಾವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಮಡಿಕೇರಿ ದಸರಾ ಆಚರಣೆಗೆ 50 ಲಕ್ಷ ರೂ. ಮತ್ತು ಗೋಣಿಕೊಪ್ಪ ದಸರಾಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಹೇಳಿದ್ದು, ದಸರಾವನ್ನು ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ಮನವಿ ಮಾಡಿಕೊಂಡಿದ್ದಾರೆ.

ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯೇ ದಶಮಂಟಪಗಳು. ಈ ಮಂಟಪಗಳ ತಯಾರಿಗೆ ಲಕ್ಷಾಂತರ ಹಣ ವ್ಯಯ ಮಾಡಬೇಕಾಗುತ್ತದೆ. ಪ್ರತಿಯೊಂದು ಸಮಿತಿಯ ಸದಸ್ಯರು ಹಗಲು ರಾತ್ರಿ ಎನ್ನದೆ ಓಡಾಡಿ, ಜನರಿಂದ ಹಣ ಸಂಗ್ರಹಿಸಿ ಮಂಟಪಗಳನ್ನು ನಿರ್ಮಾಣ ಮಾಡುತ್ತಿದ್ದರು. ಈ ಬಾರಿ ಕೊಡಗಿನ ಜನ ಸಂಕಷ್ಟದಲ್ಲಿದ್ದು, ಚಂದಾ ನೀಡುವ ಪರಿಸ್ಥಿತಿಯಲ್ಲಿ ಜನರಿಲ್ಲ. ಹೀಗಾಗಿ ಸರ್ಕಾರವೇ ಒಂದಷ್ಟು ಹೆಚ್ಚಿನ ಅನುದಾನ ನೀಡಬೇಕು ಎನ್ನುವುದು ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ ಮಹೇಶ್ ಜೈನಿ ಅವರ ಮನವಿಯಾಗಿದೆ.

ಪ್ರತಿವರ್ಷವೂ ದಸರಾಕ್ಕೆ ಮಡಿಕೇರಿ ನವವಧುವಂತೆ ಸಿಂಗಾರಗೊಳ್ಳುತ್ತಿತ್ತು. ಆದರೆ ಈ ಬಾರಿ ದಸರಾ ಕಳೆಯಿಲ್ಲ. ಜತೆಗೆ ಆಗಾಗ್ಗೆ ಮಳೆ ಸುರಿಯುತ್ತಿರುವುದು ದಸರಾ ಸಂಭ್ರಮಕ್ಕೆ ಅಡ್ಡಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಪ್ರವಾಹದ ಹೊಡೆತಕ್ಕೆ ಸಿಲುಕಿ ತೊಂದರೆ ಅನುಭವಿಸಿರುವ ಜನಕ್ಕೆ ಯಾವುದರ ಬಗ್ಗೆಯೂ ಆಸಕ್ತಿ ಇಲ್ಲದಂತಾಗಿದೆ. ಆದರೂ ಸಾಂಪ್ರದಾಯಿಕವಾಗಿ ನಡೆದು ಬಂದಿರುವ ದಸರಾವನ್ನು ಆಚರಿಸಲೇಬೇಕಾಗಿರುವುದರಿಂದ ಎಲ್ಲವನ್ನೂ ಸರಳವಾಗಿ ಮಾಡಲಾಗುತ್ತಿದೆ.

ಮಡಿಕೇರಿ ದಸರಾ ಸೂತ್ರಧಾರಿಯಾಗಿರುವ ನಾಲ್ಕು ಶಕ್ತಿದೇವತೆಗಳ ಕರಗಗಳು ಅಕ್ಟೋಬರ್ 10 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನ ಕೆರೆ ಬಳಿ ಪೂಜಾ ಕೈಂಕರ್ಯಗಳೊಂದಿಗೆ ಹೊರಡಲಿದ್ದು, ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ನಗರ ದಸರಾ ಸಮಿತಿಯು ಸಾಂಪ್ರದಾಯಿಕ ಪೂಜೆಯನ್ನರ್ಪಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳಲಿದೆ. ಆ ನಂತರ ಒಂಬತ್ತು ದಿನಗಳ ಕಾಲ ನಗರದ ಪ್ರದಕ್ಷಿಣೆ ಮಾಡುವ ಕರಗಗಳು ವಿಜಯದಶಮಿಯಂದು ಬನ್ನಿ ಪೂಜೆ ನೆರವೇರಿಸುವ ಮೂಲಕ ದಸರಾಕ್ಕೆ ತೆರೆ ಬೀಳಲಿದೆ. (ಎನ್.ಬಿ)

Leave a Reply

comments

Related Articles

error: