ಪ್ರಮುಖ ಸುದ್ದಿಮೈಸೂರು

ಕೊಡಗಿನಲ್ಲಿ ಮನೆಕಳೆದುಕೊಂಡವರಿಗೆ ನಿವೇಶನ ನಿರ್ಮಿಸಲು ಇನ್ಫೋಸಿಸ್ ಕಡೆಯಿಂದ 25ಕೋ.ರೂ : ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಘೋಷಣೆ

ವೈಭವದ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ

ಮೈಸೂರು,ಅ.10:- ಕೊಡಗಿನಲ್ಲಿ ಮನೆಕಳೆದುಕೊಂಡವರಿಗೆ ನಿವೇಶನ ನಿರ್ಮಿಸಲು ಇನ್ಫೋಸಿಸ್ ಕಡೆಯಿಂದ 25ಕೋ.ರೂ.ನೀಡುವುದಾಗಿ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಘೋಷಿಸಿದರು.

ಅವರಿಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ  2018ರ ದಸರಾ ಮಹೋತ್ಸವವನ್ನು ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ಚಾಮುಂಡಿಮೂರ್ತಿಗೆ ಪುಷ್ಪಾರ್ಚನೆಗೈದು, ದೀಪಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಕನ್ನಡ ಜನತೆಗೆ ನನ್ನ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಅವರು  ಸಂಸ್ಕೃತಿಯ ಪ್ರತಿಬಿಂಬವಾದ ದಸರಾ ಮಹೋತ್ಸವ ಉದ್ಘಾಟನೆಗೆ ನನ್ನ ಆಯ್ಕೆ ಮಾಡಿದ್ದು ನನ್ನ ಸುಕೃತ. ದಸರಾ ಶತಮಾನಗಳಿಂದ ಆಚರಿಸುತ್ತಿರುವ ಹಬ್ಬ. ಅಜ್ಜಿಯ ಕಾಲದಲ್ಲಿ  ಇದಕ್ಕೆ ‘ಮಹಾನವಮಿ’ ಹಬ್ಬ ಎಂದು  ಕರೆಯುತ್ತಿದ್ದರು. ಮೈಸೂರಿನ ದೊರೆಗಳಿಗೆ ನಾವು ಕೃತಜ್ಞರಾಗಿರಬೇಕು.ನಾಡಿನ ಅಭಿವೃದ್ಧಿಗೆ ಮೈಸೂರು ದೊರೆಗಳ ಕೊಡುಗೆ ಅಪಾರ. ಮೈಸೂರಿನ ಅರಸರು ಇಲ್ಲದಿದ್ದರೆ ನಮ್ಮ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು. ಕರ್ನಾಟಕ ಸರ್ಕಾರ ದಸರಾವನ್ನು ಅತ್ಯಂತ ಉತ್ತಮವಾಗಿ ಆಚರಿಸಿಕೊಂಡು ಬರುತ್ತಿದೆ ಎಂದರು. ಪಂಪ ಹೇಳುವ ಹಾಗೆ ಕನ್ನಡ ವೆಂದರೆ ನನಗಿಷ್ಟ. ಮತ್ತೆ ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಬೇಕು . ಕನ್ನಡ ಅತ್ಯಂತ ಸುಂದರ, ಸುಲಲಿತ ಭಾಷೆ,  ‘ಕಳಿದ ಬಾಳೆಯ ಹಣ್ಣಿನಂದದಿ’ ಎಂದು ಕವಿ ಡಿವಿಜಿಯವರ ಕಗ್ಗ ಸ್ಮರಿಸಿ  ಕನ್ನಡ ಸಚಿವರು, ಕನ್ನಡದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು.

ದಸರಾ ಇವತ್ತಿನ ಹಬ್ಬವಲ್ಲ. ಶತಮಾನಗಳಿಂದ ಆಚರಿಸಿಕೊಂಡು ಬಂದಂತಹ ಹಬ್ಬ. ವಿಜಯನಗರ ಅರಸರ ಕಾಲದಲ್ಲಿ ಆಚರಣೆಗೆ ಬಂತು. ವಿಜಯ ನಗರದ ಕೃಷ್ಣದೇವರಾಯನ ಕಾಲದಲ್ಲಿ ಮಹಾನವಿಯೆಂದೇ ಪ್ರಖ್ಯಾತವಾಗಿತ್ತು. ವಿಜಯನಗರ ಪತನವಾದ ಬಳಿಕ ಮೈಸೂರು ಅರಸರು ಅದನ್ನು ಮುಂದುವರಿಸಿಕೊಂಡು ಬಂದರು. ಮಲ್ಲಯುದ್ಧ, ನೃತ್ಯ, ನಾಟಕ ಮೆರವಣಿಗೆ ಖ್ಯಾತಿಗೊಂಡಿತ್ತು. ‘ಆಡದೇ ಮಾಡುವನು ರೂಢಿಯೊಳಗುತ್ತಮನು ಆಡಿ ಮಾಡುವನು ಮಧ್ಯಮನು, ಅಧಮ ತಾನಾಡಿಯೂ ಮಾಡದವ ‘ ಎಂದು ಸರ್ವಜ್ಞನ ವಚನ ನೆನೆದು  ಕೊಡಗು ಪ್ರವಾಹಕ್ಕೆ ಸಿಲುಕಿ ಅನೇಕರು ನಿರಾಶ್ರಿತರಾಗಿದ್ದಾರೆ. ಸರ್ಕಾರದ ಜೊತೆ ಕೆಲಸ ಮಾಡಬೇಕು. ಅದಕ್ಕಾಗಿ ಇನ್ಪೋಸಿಸ್ ವತಿಯಿಂದ  ನಿರಾಶ್ರಿತರಿಗೆ ನಿವೇಶನ ನಿರ್ಮಾಣಕ್ಕಾಗಿ 25ಕೋ.ರೂ.ನೀಡುವುದಾಗಿ ಘೋಷಿಸಿದರು.  ಹೆಬ್ಬಾಳ ಕೆರೆಯ ಪುನರುತ್ಥಾನಕ್ಕೆ ಸಂಸ್ಥೆಯಿಂದ ಅನುದಾನ ಘೋಷಿಸಿದರು. ನನ್ನ ತಾಯಿ ಎಂದಿಗೂ ಕನ್ನಡಮ್ಮನೇ. ಕುಡಿಯುವುದು ಕಾವೇರಿ ನೀರು ಎಂದು ಸ್ವ ರಚಿತ ಕವನ ವಾಚಿಸಿದರು. ಇನ್ಫೋಸಿಸ್ ಪ್ರತಿಷ್ಠಾನದ ಕೆಲಸಗಳು ಉಪಕಾರವಲ್ಲ ನಮ್ಮ ಕರ್ತವ್ಯ.ಇದು ದಾನದ ಕೆಲಸ. ನಮ್ಮ ಪ್ರತಿಷ್ಠಾನದ ವತಿಯಿಂದ ನೊಂದ ಕೊಡಗಿನವರಿಗೆ ಸಹಾಯ.ಸರ್ಕಾರದಿಂದ ಸವಲತ್ತು ಕೊಟ್ಟರೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಕೊಡಗಿನ ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ಇದೇ ವೇಳೆ ಸುಧಾಮೂರ್ತಿಯವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದೆಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ,  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವರಾದ ಜಿ.ಟಿ.ದೇವೇಗೌಡ,ಸಾ.ರಾ.ಮಹೇಶ್, ಜಯಮಾಲಾ,ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಹೆಚ್.ವಿಶ್ವನಾಥ್, ಎಲ್.ನಾಗೇಂದ್ರ,  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತಿತರರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: