ಪ್ರಮುಖ ಸುದ್ದಿ

ರಾಜಕೀಯ ದುರುದ್ದೇಶದ ಆರೋಪ : ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘ ಸ್ಪಷ್ಟನೆ

ರಾಜ್ಯ(ಮಡಿಕೇರಿ) ಅ.10:-  ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಿಬ್ಬಂದಿಗಳು ನಡೆಸಿರುವ ಹಣ ದುರುಪಯೋಗ ಪ್ರಕರಣವನ್ನು ಹಾಲಿ ಆಡಳಿತ ಮಂಡಳಿ ಬಯಲಿಗೆಳೆದು ಸಹಕಾರ ಕಾಯ್ದೆ ನಿಯಮ 64ರ ಅಡಿಯಲ್ಲಿ ತನಿಖೆ ನಡೆಸುವಂತೆ ಒಂದು ವರ್ಷದ ಹಿಂದೆಯೇ ಸಂಬಂಧಿಸಿದ ಇಲಾಖೆಗೆ ದೂರು ನೀಡಿದೆ. ಆದರೆ ಇಲಾಖೆಯ ಅಧಿಕಾರಿಗಳು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಪಿ.ಎಸ್.ಮಾದಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ  ಸಂಘದ ಮಾಜಿ ನಿರ್ದೇಶಕರೊಬ್ಬರು ಹಾಗೂ ಇಬ್ಬರು ಸದಸ್ಯರು ವಾಸ್ತವವನ್ನು ಮರೆ ಮಾಚಿ ಸಂಘದ ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದು, ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದ್ದಾರೆ.

ಸಹಕಾರ ಸಂಘದ 5 ಮಂದಿ ಸಿಬ್ಬಂದಿಗಳು ಸುಮಾರು 1.08 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆಸಿರುವುದನ್ನು ತಮ್ಮ ಆಡಳಿತ ಮಂಡಳಿ ಪತ್ತೆ ಮಾಡಿ ವರ್ಷದ ಹಿಂದೆಯೇ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದೆಯಲ್ಲದೆ, ನಿಯಮ 64ರ ಅಡಿಯಲ್ಲಿ ತನಿಖೆ ನಡೆಸಿ ಸಂಘಕ್ಕೆ ಬರಬೇಕಾದ ಹಣವನ್ನು ವಸೂಲು ಮಾಡಿಕೊಡುವಂತೆ ಕೋರಿದೆ. ಅದರಂತೆ ಸಹಕಾರ ಇಲಾಖೆ ತನಿಖೆಯನ್ನು ನಡೆಸುತ್ತಿದ್ದು, ಇದು ಇನ್ನೂ ಪ್ರಗತಿಯಲ್ಲಿದೆ. ಈ ನಡುವೆ ಸಂಘದ ಮಾಜಿ ನಿರ್ದೇಶಕರೊಬ್ಬರು ಇಬ್ಬರು ಸದಸ್ಯರೊಂದಿಗೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಅಧ್ಯಕ್ಷರ ವಿರುದ್ಧ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದರಲ್ಲದೆ, ಈ ಆರೋಪದ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಹೇಳಿದರು.

ಸಂಘಕ್ಕೆ ಆಸ್ತಿಯ ನಕಲಿ ದಾಖಲೆ ಪತ್ರಗಳನ್ನು ನೀಡಿ ಸಾಲ ಪಡೆದಿರುವ ಪ್ರಕರಣವನ್ನೂ ತಮ್ಮ ಆಡಳಿತ ಮಂಡಳಿ ಪತ್ತೆ ಮಾಡಿದೆ. ಆದರೆ ಪತ್ರಿಕಾಗೋಷ್ಠಿ ನಡೆಸಿದವರು ಅಧ್ಯಕ್ಷರೇ ಬೇನಾಮಿ ಹೆಸರಿನಲ್ಲಿ ಸಾಲ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದು, ಇದು ಅವರ ನೈತಿಕತೆ ಮತ್ತು ಸಾಕ್ಷರತೆಯ ಬಗ್ಗೆ ಸಂಶಯ ಮೂಡಿಸಿದೆ ಎಂದು ಅವರು ಟೀಕಿಸಿದರು.

ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ವಿಳಂಬವಾಗಿರುವ ಬಗ್ಗೆ ತಮಗೂ ಅಸಮಾಧಾನವಿದೆ ಎಂದು ಹೇಳಿದ ಅವರು, ಈ ಹಿನ್ನೆಲೆಯಲ್ಲಿ ಇಲಾಖಾಧಿಕಾರಿಗಳು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಆಡಳಿತ ವರ್ಗದವರು, ಪೊಲೀಸ್ ಇಲಾಖೆ ಹಾಗೂ ಕಾನೂನು ತಜ್ಞರು ಆದಷ್ಟು ಶೀಘ್ರ ತನಿಖೆಯನ್ನು ಪೂರ್ಣಗೊಳಿಸಿ ಸಂಘದ ಅಸ್ತಿತ್ವ ಮತ್ತು ಏಳಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್. ಸುಬ್ರಮಣ್ಯ, ನಿರ್ದೇಶಕ ಬಿ.ಎಂ. ಮಾಚಯ್ಯ, ಸದಸ್ಯರಾದ ಬಿ.ಕೆ.ಸುಬ್ರಮಣಿ, ಬಿ.ಕೆ.ಬೋಪಣ್ಣ ಹಾಗೂ ಡಿ.ಬಿ. ವಸಂತಕುಮಾರ್ ಉಪಸ್ಥಿತರಿದ್ದರು.(ಕೆಸಿಐ,ಎಸ್.ಎಚ್)

Leave a Reply

comments

Related Articles

error: