
ಮೈಸೂರು
ಸುಪ್ರೀಂ ಕೋರ್ಟ್ ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸುವಂತಿಲ್ಲ: ಡಾ.ಸಿ.ಕೆ.ಎನ್.ರಾಜ ಅಭಿಮತ
‘ಲಾ ಗೈಡ್’ ಕನ್ನಡ ಕಾನೂನು ಮಾಸಪತ್ರಿಕೆಯ ಹೊಸ ವರ್ಷದ ಕ್ಯಾಲೆಂಡರ್ ಹಾಗೂ ದಿನಚರಿಯನ್ನು ಸಂವಿಧಾನ ತಜ್ಞ ಡಾ.ಸಿ.ಕೆ.ಎನ್.ರಾಜ. ವಿಧಾನ ಪರಿಷತ್ ಉಪ ಸಭಾಪತಿ ಮರಿತಿಪ್ಪೇಗೌಡ ಹಾಗೂ ಇತರೆ ನ್ಯಾಯವಾದಿಗಳ ಸಮ್ಮುಖದಲ್ಲಿ ಬುಧವಾರ ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಿದರು.
ಸಂವಿಧಾನ ತಜ್ಞ ಹಾಗೂ ಹಿರಿಯ ಕಾನೂನು ಮುತ್ಸದ್ಧಿ ಡಾ.ಸಿ.ಕೆ.ಎನ್.ರಾಜ ಮಾತನಾಡಿ, ಪ್ರತಿಯೊಬ್ಬರು ದಿನಚರಿಯನ್ನು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಚಿಂತನೆಗಳನ್ನು, ಪ್ರಾಮಾಣಿಕವಾಗಿ ದಾಖಲಿಸಿ ಬರೆದಿಟ್ಟರೆ ಮುಂದೊಂದು ದಿನ ಅರ್ಥಗರ್ಭಿತ ಸಾಹಿತ್ಯವಾಗುವುದು. ಕಾಲದ ಮಹತ್ವವನ್ನು ಕ್ಯಾಲೆಂಡರ್ ಸೂಚಿಸಿ, ಜೀವನದಲ್ಲಿ ನಿನ್ನ ಕೊಡುಗೆಯೇನು ಎನ್ನುವ ಪ್ರಶ್ನೆಯೂ ಅದನ್ನು ನೋಡಿದಾಗಲೆಲ್ಲ ನನಗೆ ಕಾಡುವುದು ಎಂದರು.
ನ್ಯಾಯಾಧೀಕರಣದ ತೀರ್ಪನ್ನು ಸುಪ್ರೀಂ ಪ್ರಶ್ನಿಸುವಂತಿಲ್ಲ: ಸಂವಿಧಾನದ 262 ವಿಧಿ ನಿಯಮದ ಪ್ರಕಾರ ಅಂತಾರಾಜ್ಯ ನದಿನೀರು ಹಂಚಿಕೆ ನ್ಯಾಯಾಧೀಕರಣ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸುವ ಹಾಗಿಲ್ಲ. ಆದರೂ ಕಾವೇರಿ ವಿವಾದದಲ್ಲಿ ಮಧ್ಯ ಪ್ರವೇಶಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿ, ಬರೆದಿರುವ ಸಂವಿಧಾನ – ಸಂವಿಧಾನವಲ್ಲ. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಪೀಠವೂ ಸಾರ್ವಜನಿಕರ ಹಿತದೃಷ್ಟಿಯಲ್ಲಿ ರಚಿಸುವುದೇ ನಿಜವಾದ ಸಂವಿಧಾನ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಉಪ ಸಭಾಪತಿ ಮರಿತಿಪ್ಪೇಗೌಡ ಮಾತನಾಡಿ, ನ್ಯಾಯಾಲಯದ ತೀರ್ಪುಗಳು ಹಾಗೂ ಕಾನೂನುಗಳು ಮಾತೃಭಾಷೆಯಲ್ಲಿದ್ದರಷ್ಟೇ ಸಾಮಾನ್ಯರಿಗೆ ಅರ್ಥವಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಕಾನೂನು ತಂದಿದ್ದರೂ ಇನ್ನೂ ಪರಿಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ. ನ್ಯಾಯಾಲಯಗಳಲ್ಲಿ ಕನ್ನಡದಲ್ಲಿಯೇ ವಾದ ಮಂಡಿಸುವಂತಾಗಬೇಕು ಎಂದು ಆಶಿಸಿದರು.
‘ಲಾ ಗೈಡ್’ ಕನ್ನಡ ಮಾಸಪತ್ರಿಕೆಯೂ ಕೋರ್ಟ್ ತೀರ್ಪುಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವುದರಿಂದ ಕನ್ನಡ ಐಚ್ಚಿಕದ ಕಾನೂನು ವಿದ್ಯಾರ್ಥಿಗಳಿಗೆ ಬಹುಪಯುಕ್ತವಾಗಿದ್ದು ಸರಳವಾಗಿ ಕಾನೂನು ಅರಿವು ಮೂಡಿಸುವ ಕೆಲಸವನ್ನು ಪತ್ರಿಕೆಯೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋರ್ಟ್ ಕಲಾಪಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸುವ ಹಿರಿಯ ನ್ಯಾಯವಾದಿ ವರದರಾಜ್ ಅವರನ್ನು ವಕೀಲರ ಸಂಘದಿಂದ ಸನ್ಮಾನಿಸಲಾಯಿತು.
‘ಲಾ ಗೈಡ್’ನ 17ನೇ ವರ್ಷದ ಕ್ಯಾಲೆಂಡರ್ ಹಾಗೂ ದಿನಚರಿ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆಎಸ್ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಜಿ.ರಾಮಮೂರ್ತಿ, ನ್ಯಾಯಮೂರ್ತಿ ಬಿ.ಜಿ.ಎಂ. ಪಾಟೀಲ್, ಪತ್ರಿಕೆಯ ಸಂಪಾದಕ ಹೆಚ್.ಎನ್. ವೆಂಕಟೇಶ ಉಪಸ್ಥಿತರಿದ್ದರು. ವಕೀಲ ಹರೀಶ್ ಕುಮಾರ್ ಸ್ವಾಗತಿಸಿದರು.