ಮೈಸೂರು

ವಿಶೇಷ ಬಡ್ತಿ ವೇತನಕ್ಕೆ ಆಗ್ರಹ: ಉಪನ್ಯಾಸಕರಿಂದ ಪ್ರತಿಭಟನೆ ನಡೆಸಲು ತೀರ್ಮಾನ

ಉಪನ್ಯಾಸಕರ ವಿಶೇಷ ಬಡ್ತಿ ವೇತನ ಬಗ್ಗೆಯಿರುವ ‘ಕುಮಾರ್ ನಾಯಕ್’ ವರದಿ ಜಾರಿಗೆ ಆಗ್ರಹಿಸಿ ಪ್ರಸಕ್ತ ಸಾಲಿನಲ್ಲಿಯೂ ಹಂತ ಹಂತಗಳಲ್ಲಿ ಹೋರಾಟ ನಡೆಸಲು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘಗಳು ನಿರ್ಧರಿಸಿವೆ ಎಂದು ಅಧ್ಯಕ್ಷ ಸುರೇಶ್ ಬಾಜು ಹೆಚ್.ಜಿ ತಿಳಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ನೌಕರದ ವೇತನದಲ್ಲಿ ಅಗಾಧವಾದ ತಾರತಮ್ಯವಿದೆ. ವಿಶೇಷ ವೇತನ ಬಡ್ತಿ ವಿಚಾರವಾಗಿ ಸರ್ಕಾರವೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕಳೆದ ವರ್ಷ ನಡೆದ ಮಾತುಕತೆ ವೇಳೆ 2 ವೇತನ ಬಡ್ತಿ ನೀಡುವ ವಾಗ್ದಾನವನ್ನು ಬಿಟ್ಟು ಕೇವಲ 1 ವೇತನ ಬಡ್ತಿ ನೀಡಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಉಗ್ರಪ್ಪ ಹಾಗೂ ಗೃಹಸಚಿವ ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ನೀಡಿದ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ. ಕಳೆದ 10 ತಿಂಗಳಿಂದಲೂ ಸರ್ಕಾರ ಈ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿದ್ದು ಮುಂದೆ ನಡೆಸುವ ಪ್ರತಿಭಟನೆಯಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಬಾರದು ಎನ್ನುವ ದೃಷ್ಟಿಯಿಂದ ಹಂತ ಹಂತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆ ಹಂತಗಳು: ಪ್ರಥಮ ಹಂತವಾಗಿ ಡಿ.31ರಂದು ಮಧ್ಯಾಹ್ನ 2 ಗಂಟೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಸಂಘದಿಂದ ನೀಡಲಾಗುವುದು. ಎರಡನೇ-ಮೂರನೇ ಹಂತವಾಗಿ ಮುಂಬರುವ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಕಪ್ಪು ಪಟ್ಟಿ ಧರಿಸಿ ನಡೆಸುವುದು. ಕೊನೆಯ ಹಂತವಾಗಿ 2017ರ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಲಾಗುವುದು ಎನ್ನುವ ಬೆದರಿಕೆಯನ್ನು ಹಾಕಿದರು. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ನೀಡಿದ ಭರವಸೆಯನ್ನು ಈಡೇರಿಸಿ ಪೋಷಕರ ಹಾಗೂ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.

Leave a Reply

comments

Related Articles

error: