ಪ್ರಮುಖ ಸುದ್ದಿಮೈಸೂರು

ಆಹಾರ ಮೇಳವನ್ನು ಉದ್ಘಾಟಿಸಿದ ಸಚಿವ ಜಮೀರ್ ಅಹ್ಮದ್ ಖಾನ್ : ತಾವೇ ಖುದ್ದು ತಿನ್ನಿಸಿದ ಸಚಿವರು

ರಾಜಕೀಯಕ್ಕೆ ಬಂದಮೇಲೆ ಜಾತಿ ವಿಚಾರ ಮಾತನಾಡಬಾರದು : ಸಚಿವ ಜಮೀರ್

ಮೈಸೂರು,ಅ.10: ದಸರಾ ಮಹೋತ್ಸವದ ಪ್ರಯುಕ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾದ ಆಹಾರ ಮೇಳವನ್ನು ಇಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು ದಸರಾ ಪ್ರಯುಕ್ತ ಆಹಾರ ಮೇಳವನ್ನು ಆಯೋಜಿಸಲಾಗಿದ್ದು,ಇಲ್ಲಿ ತರಹೇವಾರಿ ಖಾದ್ಯಗಳಿವೆ. ದಸರಾ ಪ್ರಯುಕ್ತ ಮೈಸೂರಿನ ಜನತೆ ಹಾಗೂ ದಸರಾ ನೋಡಲು ಆಗಮಿಸುವ ಪ್ರವಾಸಿಗರು ಇಲ್ಲಿನ ಖಾದ್ಯಗಳ ಸವಿಯನ್ನು ಸವಿಯಬಹುದಾಗಿದೆ ಎಂದರು. ಬಳಿಕ ತಾವೇ ಖುದ್ದು ಬಡಿಸಿದರಲ್ಲದೇ, ಹಲವರಿಗೆ ತುತ್ತು ತಿನ್ನಿಸಿದರು. ಈ ಸಂದರ್ಭ ದಸರಾ  ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷ ಪಿ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಟಿಪ್ಪು ಸುಲ್ತಾನ್ ಜಯಂತಿ ನಿಲ್ಲಿಸಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡ  ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು  ರಾಜಕೀಯಕ್ಕೆ ಬಂದಮೇಲೆ ಜಾತಿ ವಿಚಾರ ಮಾತನಾಡಬಾರದು. ಜಾತಿ ಬಗ್ಗೆ ಮಾತನಾಡುವುದಾದರೆ ರಾಜಕೀಯ ಬಿಟ್ಟು ಹೋಗಲಿ. ಮುಂದೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಒಂದು ಸಮುದಾಯದ ಓಲೈಕೆಗೋಸ್ಕರ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಅವರ ಬಗ್ಗೆ ಮಾತನಾಡುವುದು ಅನಾವಶ್ಯಕ ಎಂದರು. ದಸರಾ ಕಾರ್ಯಕ್ರಮಗಳಿಗೆ ಸ್ಥಳೀಯ ಮುಖಂಡರ ಗೈರಿನ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ವಿದೇಶಿ ಆಹಾರ, ಉತ್ತರ ಕರ್ನಾಟಕ,ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ,ಭಾಗದ ಆಹಾರ, ಪಂಜಾಬ್, ರಾಜಸ್ಥಾನ್, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಸಸ್ಯಾಹಾರ ಮತ್ತು ಮಾಂಸಾಹಾರಗಳು ಆಹಾರ ಮೇಳದಲ್ಲಿ ಗಮನ ಸೆಳೆಯುತ್ತಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: