ಪ್ರಮುಖ ಸುದ್ದಿ

ಮಡಿಕೇರಿ ಕರಗ ಉತ್ಸವಕ್ಕೆ ವಿದ್ಯುಕ್ತ ಚಾಲನೆ : ನಾಲ್ಕು ಶಕ್ತಿ ದೇವತೆಗಳಿಂದ ನಗರ ಸಂಚಾರ ಆರಂಭ

ರಾಜ್ಯ(ಮಡಿಕೇರಿ) ಅ.11 : – ಐತಿಹಾಸಿಕ ಹಿನ್ನೆಲೆಯ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ‘ಕರಗ ಉತ್ಸವ’ಕ್ಕೆ  ನಗರದ ಪಂಪಿನ ಕೆರೆಯ ಬನ್ನಿಮಂಟಪದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಮಡಿಕೇರಿ ನಗರ ದಸರಾ ಸಮಿತಿ, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಂಡಿತು.

ನಗರದ ರಾಜಾಸೀಟು ಬಳಿಯ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ವ್ರತಾಧಾರಿ ಎಂ.ಹರೀಶ್, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ ಕರಗವನ್ನು ನವೀನ್ ಕುಮಾರ್, ನಗರಸಭೆ ಬಳಿಯ ಶ್ರೀ ದಂಡಿನ ಮಾರಿಯಮ್ಮ ಕರಗವನ್ನು ಜಿ.ಎ.ಉಮೇಶ್ ಮತ್ತು ಪೆನ್ಶನ್ ಲೇನ್‍ನ ಶ್ರೀ ಕೋಟೆ ಮಾರಿಯಮ್ಮ ಕರಗವನ್ನು ಪಿ.ಬಿ.ಅನೀಶ್ ಕುಮಾರ್ ಹೊರುವ ಮೂಲಕ ನಗರ ಮೆರವಣಿಗೆಯನ್ನು ಆರಂಭಿಸಿದರು.

ಮಧ್ಯಾಹ್ನ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದ ವ್ರತಧಾರಿಗಳು ಹಾಗೂ ದೇವಾಲಯ ಸಮಿತಿಯ ಪ್ರಮುಖರು ಕರಗ ಅಲಂಕಾರಕ್ಕೆ ಅಗತ್ಯವಿರುವ ಫಲ, ಪುಷ್ಪಗಳೊಂದಿಗೆ ಪಂಪಿನ ಕೆರೆಗೆ ತೆರಳಿದರು. ವಿವಿಧ ಪೂಜಾ, ಕೈಂಕರ್ಯಗಳ ಮೂಲಕ ಕರಗಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಗಳ ನಗರ ಸಂಚಾರಕ್ಕೆ ಚಾಲನೆ ನೀಡಲಾಯಿತು.

ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ನಗರ ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಶ್ರೀವಿದ್ಯಾ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ದಶಮಂಟಪ ಸಮಿತಿ ಅಧ್ಯಕ್ಷರಾದ ರವಿ ಕುಮಾರ್, ಪೌರಾಯುಕ್ತ ರಮೇಶ್, ದಸರಾ ಸಮಿತಿಯ ಉಪ ಸಮಿತಿಗಳ ಪದಾಧಿಕಾರಿಗಳು, ಡಿವೈಎಸ್‍ಪಿ ಸುಂದರರಾಜ್, ವೃತ್ತನಿರೀಕ್ಷಕರುಗಳಾದ ಐ.ಪಿ.ಮೇದಪ್ಪ, ಅನುಪ್ ಮಾದಪ್ಪ ಈ ಸಂದರ್ಭ ಹಾಜರಿದ್ದರು.

ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಪೂಜೆ ಸ್ವೀಕರಿಸಿದವು. ಸಂಪ್ರದಾಯದಂತೆ ಪೇಟೆ ಶ್ರೀರಾಮಮಂದಿರಕ್ಕೆ ತೆರಳಿದ ಕರಗಗಳು ಅಲ್ಲಿಯೂ ವಿಶೇಷ ಪೂಜೆ ಸ್ವೀಕರಿಸಿ ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಗುರುವಾರದಿಂದ ಕರಗಗಳು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಭಕ್ತರಿಂದ ಪೂಜೆ ಸ್ವೀಕರಿಸಲಿವೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: