ಮೈಸೂರು

ಅ.13ಕ್ಕೆ ವಸ್ತುಪ್ರದರ್ಶನ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮಳಿಗೆ ಉದ್ಘಾಟನೆ

ಮೈಸೂರು,ಅ.12-ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮಳಿಗೆಯನ್ನು ನಿರ್ಮಿಸಲಾಗಿದ್ದು, ಮಳಿಗೆಯನ್ನು ಅ.13 ರಂದು ಬೆಳಿಗ್ಗೆ 11.30 ಕ್ಕೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಎಂ. ಉಮಾ ಉದ್ಘಾಟಿಸಲಿದ್ದಾರೆ.

ನಗರದ ನ್ಯಾಯಾಲಯದ ಆವರಣದಲ್ಲಿರುವ ವಿಡಿಯೋ ಕಾನ್ಫರೆನ್ಸ್ ಹಾಲ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶರಾದ ಎಸ್.ಕೆ.ವಂಟಿಗೋಡಿ ತಿಳಿಸಿದರು.

ಮಳಿಗೆಯಲ್ಲಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುವುದು. ಮಳಿಗೆಯಲ್ಲಿ ನ್ಯಾಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಸಹ ಇಡಲಾಗಿದೆ. ಸರ್ಕಾರದ ಸವಲತ್ತು ಪಡೆಯುವುದರ ಬಗ್ಗೆಯೂ  ಸಾರ್ವಜನಿಕರು ಕೇಳಿ ತಿಳಿದುಕೊಳ್ಳಬಹುದು. ಮೊದಲ ಬಾರಿಗೆ ಕಾನೂನಿಗೆ ಸಂಬಂಧಿಸಿದಂತೆ ಸ್ತಬ್ಧ ಚಿತ್ರ ಸಹ ತಯಾರಿಸಲಾಗುತ್ತಿದೆ‌. ಜಂಜೂಸವಾರಿಯಲ್ಲಿ ಕಾನೂನು ಅರಿವು ಮೂಡಿಸುವಂತಹ ಸ್ತಬ್ಧ ಚಿತ್ರಗಳು ಮೂಡಿ ಬರುತ್ತಿವೆ‌ ಎಂದರು.

ರಾಜ್ಯ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಲಾಗುವುದು ಮತ್ತು ಪರಿಶಿಷ್ಟ ಜಾತಿ, ಪರಿಶಿಪ್ಟ ಪಂಗಡ, ಅಪ್ರಾಪ್ತ ವಯಸ್ಕರಿಗೆ, ವಿಕಲಚೇತನರಿಗೆ, ಬುದ್ಧಿಮಾಂದ್ಯರಿಗೆ, ಪ್ರಕೃತಿ ವಿಕೋಪಕ್ಕೆ ಒಳಗಾಗದವರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ಆದಾಯದ ಮಿತಿ ಅಗತ್ಯತೆ ಇಲ್ಲದೆ ಹಾಗೂ ಇತರರಿಗೆ ವಾರ್ಷಿಕ ಆದಾಯ 1,00,000 ರೂ. ಒಳಗಡೆ ಇರುವವರಿಗೆ ಕಾನೂನು ನೆರವು ನೀಡಲಾಗುವುದು.  ಕಾನೂನು ಸಲಹೆ ಪಡೆಯಲು ಯಾವುದೇ ಆದಾಯ ಮಿತಿಯ ಅಗತ್ಯವಿಲ್ಲದೆ ಎಲ್ಲರೂ ಕಾನೂನು ಸಲಹೆ ಪಡೆಯಲು ಅರ್ಹರಾಗಿರುತ್ತಾರೆ.  ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ಜನ ಸಾಮಾನ್ಯರಿಗೆ ಎದುರಾಗುವ ಸಮಸ್ಯೆಗಳು ಹಾಗೂ ಇತರೆ ಕಾನೂನಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಬಗ್ಗೆಯೂ ಕಾನೂನು ಸಲಹೆಯನ್ನು ಮತ್ತು ನೆರವು ನೀಡುವ ಕಾರ್ಯವನ್ನು ಇಲ್ಲಿ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರರಾವ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಧಿಕಾರಿ ಎನ್.ಎಂ.ಶಶಿಕುಮಾರ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಬಿ.ವಿ.ರಾಮಮೂರ್ತಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಜಿ.ಮಹಮ್ಮದ್ ಮುಜೀರುಲ್ಲಾ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಎಂ.ಎನ್)

Leave a Reply

comments

Related Articles

error: