ಮೈಸೂರು

ತಡವಾಗಿ ತಲುಪಿದ ಆಹ್ವಾನ ಪತ್ರಿಕೆ : ಶಾಸಕ ಎಲ್ ನಾಗೇಂದ್ರರಿಂದ ಯುವ ದಸರಾ ಬಹಿಷ್ಕಾರ: ಪ್ರತಿಷ್ಠೆ ಬಿಟ್ಟು ಪಾಲ್ಗೊಳ್ಳಿ ; ಸಚಿವ ಸಾ.ರಾ.ಮಹೇಶ್

ಮೈಸೂರು,ಅ.13:- ಯುವ ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉದ್ಘಾಟನೆಯ ವೇಳೆ ತಲುಪಿಸಿದ್ದರಿಂದ ಶಾಸಕ ಎಲ್.ನಾಗೇಂದ್ರ ಅವರು ಯುವ ದಸರಾವನ್ನು ಬಹಿಷ್ಕರಿಸಿದ್ದಾರೆ. ನಾಡಹಬ್ಬ ಅಂದ ಮೇಲೆ ಅಡಚಣೆಗಳಾಗೋದು ಸಹಜ. ಪ್ರತಿಷ್ಠೆ ಬಿಡಬೇಕು ಎಂದು ಸಚಿವ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ 6.30ಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಅದಕ್ಕೆ ಸಂಬಂಧಪಟ್ಟಂತೆ ಉದ್ಘಾಟನೆಗೆ ಆಹ್ವಾನ ಪತ್ರಿಕೆ ಶಾಸಕ ಎಲ್.ನಾಗೇಂದ್ರ ಅವರನ್ನು ತಲುಪಿರಲಿಲ್ಲ. ಅವರು ಬೆಳಿಗ್ಗೆಯಿಂದ ಯುವ ದಸರಾ ಸಮಿತಿಯ ಕಾರ್ಯದರ್ಶಿ ನಟರಾಜ್ ಅವರಿಗೆ ಈ ಸಂಬಂಧ ಎಷ್ಟೇ ಬಾರಿ ಕರೆ ಮಾಡಿದರೂ, ಎಸ್ ಎಂ ಎಸ್ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಸಂಜೆ 6.30ಕ್ಕೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದರು. ಇದು ಜನಪ್ರತಿನಿಧಿಗೆ ಮಾಡಿದ ಅವಮಾನ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದ್ದು, ಯುವ ದಸರಾವನ್ನು ಬಹಿಷ್ಕರಿಸಿದ್ದಾರೆ.

ಚಾಮರಾಜ ಕ್ಷೇತ್ರದಲ್ಲಿ ಅದೇ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಡಬೇಕಾದ ಸೌಜನ್ಯವನ್ನು ಸಂಬಂಧಿಸಿದ ಅಧಿಕಾರಿಗಳು ತೋರಲಿಲ್ಲ. ವಿರೋಧ ಪಕ್ಷದ ಶಾಸಕರ ಮೇಲೆ ಈ ರೀತಿಯ ಅಸಡ್ಡೆಯ ಭಾವನೆಯನ್ನು ಆಡಳಿತ ಪಕ್ಷ ತೋರುವುದು ಸರಿಯಾದ ಕ್ರಮವಲ್ಲ. ಯಾವೊಬ್ಬ ಅಧಿಕಾರಿಗಳೂ ಕೂಡ ಈ ಕುರಿತು ಜವಾಬ್ದಾರಿ ಹೊರಲು ಸಿದ್ಧರಿಲ್ಲದೇ ಅವರ ಮೇಲೆ ಇವರು, ಇವರ ಮೇಲೆ ಅವರು ದೂರುತ್ತಿದ್ದು ಇದರಿಂದ ಮನನೊಂದಿದ್ದು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸಾ.ರಾ.ಮಹೇಶ್ ಇದು ಯಾರೋ ಒಬ್ಬರು ನಡೆಸುವ ಕಾರ್ಯಕ್ರಮವಲ್ಲ. ಇದು ನಾಡಹಬ್ಬ. ಎಲ್ಲರೂ ಸೇರಿ ಮಾಡಬೇಕಾದ ಕಾರ್ಯಕ್ರಮ. ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಅಡಚಣೆಗಳಾಗುವುದು ಸಹಜ. ಪ್ರತಿಷ್ಠೆ ಬಿಟ್ಟು ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: