ಪ್ರಮುಖ ಸುದ್ದಿಮೈಸೂರು

ಅಧಿಕಾರಿಗಳಿಂದ ಮತ್ತೊಂದು ಎಡವಟ್ಟು : ಗೋಲ್ಡ್ ಪಾಸ್ ಇದ್ದರೂ ಮಹಿಳಾ ನ್ಯಾಯಾಧೀಶರಿಗೆ ನೀಡಿಲ್ಲ ಪ್ರವೇಶ ; ದೂರು ದಾಖಲು

ಮೈಸೂರು,ಅ.13:- ವಿಚಿತ್ರ ನೋಡಿ ದಸರಾ ಉದ್ಘಾಟನೆ ವೇಳೆ ಅದ್ಯಾವುದೋ ವೈದ್ಯೆ ಚಾಮುಂಡಿಬೆಟ್ಟದಲ್ಲಿನ ವೇದಿಕೆಯೇರಿ ಸಂಭ್ರಮಿಸಿ, ಶಿಷ್ಟಾಚಾರ ಉಲ್ಲಂಘಿಸಿದ್ದು ಆಗಿದೆ. ಆವತ್ತು ಎಚ್ಚರವಿಲ್ಲದಂತೆ ವರ್ತಿಸಿದ ಅಧಿಕಾರಿಗಳು ಇಂದು ಗೋಲ್ಡ್ ಪಾಸ್ ಇದ್ದರೂ ಮಂಡ್ಯ ಜಿಲ್ಲೆಯ ಮಹಿಳಾ ನ್ಯಾಯಾಧೀಶರೋರ್ವರನ್ನು ಚಾಮುಂಡಿ ದೇವಸ್ಥಾನದ ಒಳಗೆ ಹೋಗಲು ಬಿಡದ ಕಾರಣ ನ್ಯಾಯಾಧೀಶರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.

ಇಂದು ಮಂಡ್ಯ ಜಿಲ್ಲೆಯ ಮಹಿಳಾ ನ್ಯಾಯಾಧೀಶರು ತಮ್ಮ ಕುಟುಂಬಿಕರೊಂದಿಗೆ ದಸರಾ ನೋಡಿ, ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲೆಂದು ಬಂದಿದ್ದರು. ಆದರೆ ಬೆಟ್ಟದಲ್ಲಿ ಕರ್ತವ್ಯದಲ್ಲಿದ್ದ ಇಒ ಮತ್ತು ಭದ್ರತಾ ಸಿಬ್ಬಂದಿಗಳು ಅವರನ್ನು ಒಳಗೆ ಹೋಗಲು ಬಿಡಲಿಲ್ಲ ಎನ್ನಲಾಗಿದೆ. ನಾನು ಮಂಡ್ಯ ಜಿಲ್ಲೆಯ ನ್ಯಾಯಾಧೀಶರು. ನನ್ನ ಬಳಿ ಗೋಲ್ಡ್ ಪಾಸ್ ಇದೆ ಅಂತ ಕೂಡ ಅಧಿಕಾರಿಗಳಿಗೆ ತೋರಿಸಿದ್ದಾರೆ. ಆದರೂ ಕೂಡ ನ್ಯಾಯಾಧೀಶರೊಂದಿಗೆ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದು, ಯಾವ ಪಾಸ್ ಇದ್ದರೇನು? ಏ ಹೋಗಮ್ಮೋ ಎಂದು ಏಕವಚನದಲ್ಲಿ ಹೇಳಿದ್ದಾರೆ. ಇದರಿಂದ ಮನನೊಂದ ನ್ಯಾಯಾಧೀಶರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾನು ನಾಲ್ಕು ಸಾವಿರ ನೀಡಿ ಗೋಲ್ಡ್ ಪಾಸ್ ಖರೀದಿಸಿದ್ದೆ. ಅದಕ್ಕೂ ಬೆಲೆ ಇಲ್ಲವೇ ಎಂದು ಠಾಣೆಯಲ್ಲಿಯೇ ಗದ್ಗದಿತರಾಗಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಇನ್ಸಪೆಕ್ಟರ್ ಅವರು ಇಒ ಪ್ರಕಾಶ್, ಮಹದೇವಸ್ವಾಮಿ, ಮತ್ತೆ ಅಲ್ಲಿ ಪೊಲೀಸ್ ಸಿಬ್ಬಂದಿಗಳು ಯಾರು ಕರ್ತವ್ಯದಲ್ಲಿದ್ದರು ಎಂಬ ಕುರಿತು ಸರಿಯಾದ ಮಾಹಿತಿ ಪಡೆದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: