ಕರ್ನಾಟಕಪ್ರಮುಖ ಸುದ್ದಿ

ಸಂಪುಟ ವಿಸ್ತರಣೆ ಮರೆತಂತಿರುವ ಹೈಕಮಾಂಡ್: ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ

ಬೆಂಗಳೂರು (ಅ.13): ಒಂದಿಲ್ಲೊಂದು ನೆಪ ಹೇಳಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಮುಂದೂಡುತ್ತಿರುವುದು ಕಾಂಗ್ರೆಸ್ ಶಾಸಕರಲ್ಲಿನ ಅಸಮಾಧಾನ ಹೆಪ್ಪುಗಟ್ಟುವಂತೆ ಮಾಡಿದೆ.

ಆರಂಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಸಿದ್ದರಾಮಯ್ಯ ಅವರ ಯುರೋಪ್ ಪ್ರವಾಸ, ಪಿತೃಪಕ್ಷದ ನೆಪಹೇಳಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿದ್ದ ಕಾಂಗ್ರೆಸ್ ಪಕ್ಷವು ಇದೀಗ ಉಪಚುನಾವಣೆ ನೆಪವನ್ನು ಹೇಳುತ್ತಿದೆ. ಉಪಚುನಾವಣೆ ಮುಗಿಯುತ್ತಿದ್ದಂತೆ ಬೆಳಗಾವಿಯಲ್ಲಿ ಹತ್ತು ದಿನಗಳ ಚಳಿಗಾಲದ ಅಧಿವೇಶನ ನಡೆಯಲಿದ್ದು ಡಿಸೆಂಬರ್ ಅಂತ್ಯದವರೆಗೂ ಸಚಿವ ಸಂಪುಟ ವಿಸ್ತರಣೆ ಮುಂದೂಡುವ ಕಾಂಗ್ರೆಸ್ ಉದ್ದೇಶಕ್ಕೆ ಪೂರಕವಾಗಿದೆ.

ಡಿಸೆಂಬರ್ ಬಳಿಕ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಗೊಳ್ಳಲಿದ್ದು, ಆ ವೇಳೆ ಕೂಡ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಅನುಮಾನ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಳಗೊಳಗೇ ಕುದಿಯುತ್ತಿರುವ ಕಾಂಗ್ರೆಸ್ ಶಾಸಕರು, ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ಶಾಸಕರು ಮಾತ್ರವಲ್ಲ, ನಿಗಮ ಮಂಡಳಿ ಸ್ಥಾನಗಳಿಗಾಗಿ ಕಾದುಕುಳಿತಿರುವ ಕಾರ್ಯಕರ್ತರೂ ಕೂಡ ಪಕ್ಷದ ಮುಖಂಡರ ಕುಂಟು ನೆಪಕ್ಕೆ ಬೇಸರಗೊಂಡಿದ್ದಾರೆ. ಸಂಪುಟ ವಿಸ್ತರಣೆ ಮಾಡದೆ 85 ನಿಮಗ ಮಂಡಳಿಗಳ ನೇಮಕವೂ ಅನುಮಾನ ಎಂಬಂತಾಗಿದೆ. ಎರಡು ತಿಂಗಳ ಹಿಂದೆ ಸರ್ಕಾರದಿಂದ ಹೊರಟ ಆದೇಶದ ಪ್ರಕಾರ ಸಚಿವರೇ ಸದ್ಯಕ್ಕೆ ನಿಗಮ ಮಂಡಳಿ ಅಧ್ಯಕ್ಷರಾಗಿರುತ್ತಾರೆ. ಆರ್ಥಿಕ ಹೊರೆ ತಗ್ಗಿಸುವುದು ಈ ನೇಮಕ ಮಾಡದ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಾಲಿಗೆ ಆರು ಸಚಿವ ಸ್ಥಾನ ಖಾಲಿ ಇದ್ದು, 22 ಆಕಾಂಕ್ಷಿಗಳಿದ್ದಾರೆ. ಹಿರಿತನ, ಜಾತಿ, ಪ್ರದೇಶ, ಹೀಗೆ ವಿವಿಧ ಮಾನದಂಡಗಳಲ್ಲಿ ಸಚಿವ ಸ್ಥಾನ ಹಂಚಿಕೆ ಕಷ್ಟ ಸಾಧ್ಯ, ವಿಸ್ತರಣೆ ಮಾಡಿದರೂ ಬಂಡಾಯ ಖಚಿತ ಎಂಬ ಆತಂಕದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.  ಮೊದಲು ಸಿದ್ದರಾಮಯ್ಯ ಯುರೋಪ್ ಪ್ರವಾಸ, ಬಳಿಕ ಪಿತೃಪಕ್ಷ ಇದೀಗ ಲೋಕಸಭಾ, ವಿಧಾನಸಭಾ ಉಪ ಚುನಾಔಣೆಯ ನೆಪವೊಡ್ಡಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗುತ್ತಿದೆ. ಹೀಗೆ ಮುಂದೂಡಿದರೆ ಬಳಿಕ ಲೋಕಸಭಾ ಚುನಾವಣೆ ಸಿದ್ಧತೆ ಆರಂಭಗೊಳ್ಳಲಿದೆ. ಅಲ್ಲಿಯವರೆಗೂ ಶಾಸಕರನ್ನು ತನ್ನೆಡೆಗೆ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾದಂತೆ ಕಾಣುತ್ತಿದೆ.

ಉಪಚುನಾವಣೆ ಫಲಿತಾಂಶ ನವೆಂಬರ್ 3ರ ಪ್ರಕಟಗೊಳ್ಳುತ್ತದೆ. ಬಳಿಕ ಚಳಿಗಾಲದ ಅಧಿವೇಶನ ತಯಾರಿ ನಡೆಯುತ್ತದೆ. ನಂತರ ಲೋಕಸಭಾ ಚುನಾವಣೆ ಕಾವು ಶುರುವಾಗುತ್ತದೆ. ಒಟ್ಟಾರೆ ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಮಾಡುವುದು ಅನುಮಾನ ಎಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲೇ ಕೇಳಿಬರುತ್ತಿದೆ. (ಎನ್.ಬಿ)

Leave a Reply

comments

Related Articles

error: