ಮೈಸೂರು

ಶಿಕ್ಷಣವು ಉದ್ಯೋಗ, ಸಮಾನತೆ ಮತ್ತು ಪ್ರಾವೀಣ್ಯತೆಯನ್ನು ಸಾಧಿಸುವಂತಿರಬೇಕು : ಅಪರ್ಣ ಗಾರ್ಗ್

ಮೈಸೂರು,ಅ.13:- ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂದು ಸ್ನಾತಕೋತ್ತರ ವಿದ್ಯಾರ್ಥಿಗಳ ವೇದಿಕೆ ಉದ್ಘಾಟನೆ ಮತ್ತು ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಯಿತು.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ವ್ಯವಸ್ಥಾಪಕಿ ಅಪರ್ಣ ಗಾರ್ಗ್ (IRAS) ಅವರು ಸ್ನಾತಕೋತ್ತರ ವಿದ್ಯಾರ್ಥಿಗಳ ವೇದಿಕೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ ಜೆಎಸ್‍ಎಸ್ ಮಹಾವಿದ್ಯಾಪೀಠವು ದೇಶ ವಿದೇಶಗಳಲ್ಲಿ ವಿವಿಧ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಶಿಕ್ಷಣವು ಎಲ್ಲರಿಗೂ ಎಲ್ಲಾ ವಿಧವಾಗಿ ದೊರೆಯುವಂತೆ ಮಾಡುತ್ತಿದೆ.  ಇದರ ಹಿಂದೆ ಪರಮಪೂಜ್ಯರುಗಳ ಶ್ರಮವಿದೆ. ಈ ಶ್ರಮದ ಸಮಾನತೆ – ಸಬಲೀಕರಣದಂತಹ ಹಲವು ಗುರಿಗಳಿವೆ. ಶಿಕ್ಷಣ ಎನ್ನುವುದು ಸಮಾಜದ ಪ್ರಗತಿಗೆ ಉತ್ತಮವಾದ ಸಾಧನ. ಈ ಸಾಧನವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲೀಕರಣವನ್ನು ಸಾಧಿಸಬಹುದು. ಇದರಿಂದ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಇಂದಿನ ಶಿಕ್ಷಣವು ಉದ್ಯೋಗ – ಸಮಾನತೆ –  ಪ್ರಾವೀಣ್ಯತೆಯನ್ನು ಸಾಧಿಸುವಂತಿರಬೇಕು. ಇವುಗಳನ್ನು ಸಾಧಿಸುವಲ್ಲಿ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿವೆ. ಇದರ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ಪೂರ್ಣಗೊಳ್ಳುವುದು ಸಾಂಸ್ಕೃತಿಕ ಹವ್ಯಾಸ ಮತ್ತು ಚಟುವಟಿಕೆಗಳಿಂದ. ವಿದ್ಯಾರ್ಥಿಗಳು ಉತ್ತಮ ಹವ್ಯಾಸ, ಆದರ್ಶ ತತ್ವಗಳು ಮತ್ತು ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಸ್ಪರ್ಧಾತ್ಮಕ ಮತ್ತು ಸಹಕಾರಿ ಮನೋಭಾವದೊಂದಿಗೆ ಸಾಗುವುದು ಉತ್ತಮ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ. ಸಾಂಬಶಿವಯ್ಯನವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು.  ಇದಕ್ಕೆ ಕಾಲೇಜು, ಕಾಲೇಜಿನ ಸ್ನಾತಕೋತ್ತರ ವೇದಿಕೆ, ವಿಭಾಗಗಳು ಸದಾ ಪ್ರೋತ್ಸಾಹವನ್ನು ನೀಡುತ್ತಿವೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಪ್ರತಿಭಾ ದಿನಾಚರಣೆ ಅಂಗವಾಗಿ ವೇದಿಕೆಯಲ್ಲಿ ಸುಮಾರು 14 ವಿವಿಧ ರೀತಿಯ ಸ್ಪರ್ಧೆಗಳು ನಡೆದವು. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪನವರು ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಎಂ.ಪಿ. ಸೋಮಶೇಖರ್ ವಂದಿಸಿದರು. ಡಾ. ಆರ್. ಸುಹಾಸ್‍ ನಿರೂಪಿಸಿದರು. ವಿದ್ಯಾರ್ಥಿನಿ ಅನುಶ್ರೀ ಪ್ರಾರ್ಥಿಸಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: