ಪ್ರಮುಖ ಸುದ್ದಿ

ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಉತ್ತಮ ಇಳುವರಿ : ಎಂ.ಸಿ.ನಾಣಯ್ಯ

ರಾಜ್ಯ(ಮಡಿಕೇರಿ)ಅ.13:- ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಮಡಿಕೇರಿ ನಬಾರ್ಡ್ ಬ್ಯಾಂಕ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಂ.ಸಿ.ನಾಣಯ್ಯ ಅಭಿಪ್ರಾಯಿಸಿದರು.

ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ನಡೆದ ಸೋಮವಾರಪೇಟೆ ತಾಲೂಕು ಭುವನಮಂದಾರ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೃಷಿಗೆ ಪೂರಕ ವಾತಾವರಣವಿರುವ ಪ್ರಪಂಚದ 10 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅದರೂ ದೇಶದಲ್ಲಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳ ರಪ್ತುವಿನಲ್ಲಿ ಒಂದಷ್ಟು ಹಿನ್ನೆಡೆಯಾಗುತ್ತಿದ್ದು, ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಕೃಷಿಕರು ಹೆಚ್ಚಿನ ಗಮನಹರಿಸಬೇಕು ಎಂದು ಅಭಿಪ್ರಾಯಿಸಿದರು.

ದೇಶದ ರೈತರು ಉತ್ಪಾದಿಸಿದ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭಿಸಬೇಕು. ಕೃಷಿ ಕ್ಷೇತ್ರ ಲಾಭದಾಯಕಗೊಳಿಸುವ ಸದುದ್ಧೇಶದಿಂದ ನಬಾರ್ಡ್ ಬ್ಯಾಂಕ್‍ನ ಆರ್ಥಿಕ ಸಹಾಯದೊಂದಿಗೆ ರೈತ ಉತ್ಪಾದಕರ ಕಂಪನಿಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ 2000 ರೈತ ಉತ್ಪಾದಕರ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 185 ಹಾಗು ಜಿಲ್ಲೆಯಲ್ಲಿ ಮೂರು ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ರೈತ ಉತ್ಪಾದಕರ ಕಂಪನಿಗಳಲ್ಲಿ ರೈತರು ಷೇರುದಾರರಾಗಿರುತ್ತಾರೆ. ಇಂತಹ ಕಂಪೆನಿಗಳಲ್ಲಿ ಕೃಷಿಕರು ತೊಡಗಿಸಿಕೊಳ್ಳಬೇಕು. ತಮ್ಮ ಕೃಷಿಗೆ ಬೇಕಾದ ಕೃಷಿ ಸಲಕರಣೆ, ಕ್ರಿಮಿನಾಶಕ, ಶಿಲೀಂದ್ರನಾಶಕಗಳನ್ನು ಖರೀದಿಸಬೇಕು. ಆಡಳಿತ ಮಂಡಳಿಯವರು ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ನಂತರ ವಿತರಣೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ, ಪದಾಧಿಕಾರಿಗಳಾದ ಕಾಲಿಸ್ತಾ ಡಿಸಿಲ್ವಾ, ಪಿ.ಡಿ.ಮೋಹನ್‍ದಾಸ್, ಕೆ.ಪಿ.ರಮೇಶ್, ಎನ್.ಎ.ಚಂದ್ರಶೇಖರ್, ಕೆ.ಸಿ.ಸೂರ್ಯಕುಮಾರ್, ಪಿ.ಜೆ.ವಿನ್ಸೆಂಟ್, ಎಂ.ಡಿ.ಲೋಕೇಶ್, ಕೆ.ಜಿ.ಗುಂಡಪ್ಪ, ಕವಿತಾ ವಿರೂಪಾಕ್ಷ, ಚಂದಿಕಾ ಕುಮಾರ್, ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ದಯಾನಂದ್ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: