ದೇಶಪ್ರಮುಖ ಸುದ್ದಿ

ಬಿಜೆಪಿಗೆ ಮಿ ಟೂ ಬಿಸಿ: ಅಕ್ಬರ್ ವಿರುದ್ಧದ ಆರೋಪಗಳ ಪರಿಶೀಸುತ್ತೇವೆಂದ ಅಮಿತ್ ಶಾ

ಹೈದರಾಬಾದ್ (ಅ.13): ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಎಂ.ಜೆ ಅಕ್ಬರ್ ಅವರ ಮೇಲಿರುವ #ಮೀ ಟೂ ಕಳಂಕದ ಬಿಸಿ ಇದೀಗ ಬಿಜೆಪಿಗೆ ತಟ್ಟಿದೆ. ಅವರು ವಿವಿಧ ಪತ್ರಿಕೆಗಳ ಸಂಪಾದಕರಾಗಿದ್ದ ವೇಳೆ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹೊರಿಸಿರುವುದನ್ನು ಕೇಂದ್ರದ ಬಿಜೆಪಿ ನಾಯಕತ್ವ ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯಿಸಿ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

ಇದೇ ವೇಳೆ “ಆರೋಪಗಳ ಸತ್ಯಾಸತ್ಯತೆಯನ್ನೂ ತಿಳಿಯಬೇಕಾಗಿದೆ. ಆರೋಪಗಳನ್ನು ಯಾರು ಹೊರಿಸಿದ್ದಾರೆಂಬುದನ್ನೂ ಗಮನಿಸಬೇಕಾಗಿದೆ. ನನ್ನ ಹೆಸರು ಕೂಡ ಹಾಕಿ ಏನಾದರೂ ಬರೆಯಬಹುದು” ಎಂದ ಅಮಿತ್ ಷಾ ಅವರು, ಖಂಡಿತ ಈ ವಿಚಾರವನ್ನು ಪರಿಶೀಲಿಸುವುದಾಗಿ ಹೇಳಿದರು.

ಆದರೆ ಈಗಾಗಲೇ ಬಿಜೆಪಿ ವಲಯದಲ್ಲಿ ಅಕ್ಬರ್ ಅವರು ಸಚಿವ ಹುದ್ದೆಯಲ್ಲಿ ಮುಂದುವರಿದಲ್ಲಿ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುವುದು ಎಂಬ ಅಭಿಪ್ರಾಯವಿದೆ. ಅಕ್ಬರ್ ಅವರ ವಿರುದ್ಧದ ಆರೋಪಗಳು ಸಾಬೀತಾದರೆ ಅವರು ರಾಜೀನಾಮೆ ನೀಡಬೇಕೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಥಾವಳೆ ಹೇಳಿದ್ದಾರೆ. ಆರೋಪಗಳು ಗಂಭೀರವಾಗಿದ್ದು ಕ್ರಮ ಕೈಗೊಳ್ಳುವುದು ಪಕ್ಷಕ್ಕೆ ಬಿಟ್ಟಿದ್ದು ಎಂದೂ ಅವರು ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: