ಮೈಸೂರು

ಸಾಮಾಜಿಕ ಕಳಕಳಿ ಸಾರಿದ ‘ಅರಿವು’

ಸಾಮಾಜಿಕ ಕಳಕಳಿಯ ಶಿಕ್ಷಣದ ಮಹತ್ವ ಸಾರುವ ‘ಅರಿವು’ ಕಿರುಚಲನಚಿತ್ರವು ಬುಧವಾರ ಮೈಸೂರು ವಿವಿಯ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಸೆಳೆಯಿತು.

ಆನಂದ್ ಸಿನಿಮಾಸ್, ನಮ್ಮೂರ ಪಾಠಶಾಲೆ ಅರ್ಪಿಸುವ ‘ಅರಿವು’ ಚಲನಚಿತ್ರ ಪ್ರದರ್ಶನವನ್ನು ಕುವೆಂಪು  ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಚಲನಚಿತ್ರ ನಟ ಚೇತನ್ ಉತ್ತಮ ಸಮಾಜ ಸೃಷ್ಟಿಸಲು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂದು ಸಲಹೆ ನೀಡಿದರು. ಆಂಗ್ಲಭಾಷೆ ಭೂತಕಾಲವಾಗಿದ್ದು, ಕನ್ನಡ ಮತ್ತು ಇತರೆ ಸ್ಥಳೀಯ ಭಾಷೆಗಳು ಭವಿಷ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಮಹಾತ್ಮ ಪುಲೆ-ಅಂಬೇಡ್ಕರ್ ವಾದಿ ಎನ್.ಮಹೇಶ್. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಬಿ.ಎನ್.ಯಶೋಧ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಚಿತ್ರ ನಿರ್ಮಾಪಕ ಮಹೇಂದ್ರಮನೂತ್, ನಿರ್ದೇಶಕ ಆರ್.ರಂಗನಾಥ ಬಹುಜನ ಚಳುವಳಿಯ ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಿವಕುಮಾರ, ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟ, ಕನಕಪುರದ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ನ ಮಲ್ಲಿಕಾರ್ಜುನ್, ಬಹುಜನ ವಿದ್ಯಾರ್ಥಿ ಸಂಘದ ಸಂಯೊಜಕ ಎಚ್.ಎಸ್.ಗಣೇಶ ಮೂರ್ತಿ, ಉದ್ಯಮಿ ಶರತ್ ತೇಜಸ್ವಿ ಹಾಗೂ ಇತರರು ಉಪಸ್ಥಿತರಿದ್ದರು.

‘ಅರಿವು’ ಸಂಕ್ಷಿಪ್ತ :  ಹಳ್ಳಿಯ ವಾತಾವರಣದಲ್ಲಿ ಶಿಕ್ಷಣದ ಏಳುಬೀಳುಗಳನ್ನು ಕಣ್ಮುಟ್ಟುವಂತೆ ಚಿತ್ರಿಸಲಾಗಿದೆ. ರೈತ ವರ್ಗದ ಪೋಷಕ ತನ್ನ ಮಗುವೂ ಪಟ್ಟಣದ ಮಕ್ಕಳಂತೆ ವಿದ್ಯಾವಂತನಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕೆನ್ನುವ ಹಂಬಲ, ಸಾಲದ ಹೊಡೆತಕ್ಕೆ ಆತ್ಮಹತ್ಯೆಗೆ ಶರಣಾಗುವ ಪೋಷಕರು, ಪೋಷಕರ ಆಸೆಯಂತೆ ಓದಿ ಉನ್ನತ ಸ್ಥಾನಕ್ಕೇರುವ ಮಗ ಮುಂದೆ ಇತರರ ಮಾರ್ಗದರ್ಶಿಯಾದ ಶಿಕ್ಷಕನಾಗಿ ಶಿಕ್ಷಣದಿಂದ ವಂಚಿತರಿಗೆ ಅರಿವು ಮೂಡಿಸುವ ಕೈಂಕರ್ಯಕ್ಕೆ ನಿಲ್ಲುವ ಕಥೆ.    ಶಾಲೆಯೆಂದರೆ ದೂರ ಓಡುವ ಮಕ್ಕಳು ಮಾಡುವ ತುಂಟಾಟ ಪೋಷಕರ ಮಕ್ಕಳ ಬಗೆಯಿರುವ ಕಳಕಳಿ, ಕುಡುಕರ ಚೆಲ್ಲಾಟ  ಇದರೊಟ್ಟಿಗೆ ‘ಅರಿವು’ ಸಾಮಾಜಿಕ ಸಂದೇಶವನ್ನು ಸಾರುವುದರೊಂದಿಗೆ ಮಕ್ಕಳು ದಾರಿತಪ್ಪಿದಾಗ ಎದುರಾಗುವ ಸನ್ನಿವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಪಾತ್ರಧಾರಿಗಳು ಹಾಗೂ ನಿರ್ದೇಶಕನ ಶ್ರಮ ಚಿತ್ರದಲ್ಲಿ ಅರ್ಥಪೂರ್ಣವಾಗಿ ಮೂಡಿದೆ. ಅಂತ್ಯದಲ್ಲಿ ‘ಮಕ್ಕಳನ್ನು ಹಳ್ಳಿಯಲ್ಲಿಯೇ ಓದಿಸಬೇಕು’ ಎನ್ನುವ ಪೋಷಕರಿಗೆ ನೀಡುವ ಸಂದೇಶವೂ ವಾಸ್ತವತೆಯ ಅನಾವರಣಗೊಳಿಸಿತು.

 

Leave a Reply

comments

Related Articles

error: