ಮೈಸೂರು

ವಸ್ತುಪ್ರದರ್ಶನದಲ್ಲಿ 22 ಅಡಿ ಎತ್ತರದ ಗಾಂಧಿ ಪ್ರತಿಮೆ

ಮೈಸೂರು. ಅ.15:-  ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಿರುವ “ಗಾಂಧಿ 150” ವಸ್ತುಪ್ರದರ್ಶನ ಮಳಿಗೆಯನ್ನು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಭಾನುವಾರ ಉದ್ಘಾಟಿಸಿದರು.

ಈ ಬಾರಿಯ ದಸರಾ ವಸ್ತುಪ್ರದರ್ಶನದಲ್ಲಿ ಮಹಾತ್ಮ ಗಾಂಧೀಜಿ ಅವರ ಬೃಹತ್ ಪ್ರತಿಮೆ ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದೆ. ಪ್ರತಿಮೆ 22 ಅಡಿ ಎತ್ತರವಿದ್ದು, ಗಾಂಧೀಜಿ ಧ್ಯಾನ ಸ್ಥಿತಿಯಲ್ಲಿ ಕುಳಿತಿದ್ದಾರೆ. ಪ್ರತಿಮೆ ಅತ್ಯಂತ ಸುಂದರವಾಗಿ ರೂಪುಗೊಂಡಿದ್ದು, ವಸ್ತುಪ್ರದರ್ಶನದಲ್ಲಿ ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ಮಕ್ಕಳ ಮನಸೆಳೆಯುತ್ತಿದೆ.

ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ಸದಾ ಎಲ್ಲರಿಗೂ ಆದರ್ಶ. ಇವರ ಜೀವನಚರಿತ್ರೆಯ ವಿವಿಧ ಕಾಲಘಟ್ಟಗಳನ್ನು ಇಲ್ಲಿ ವೀಕ್ಷಿಸಬಹುದು. ಅವರು ಭಾಗವಹಿಸಿದ ದುಂಡು ಮೇಜಿನ ಸಭೆ, ಉಪ್ಪಿನ ಸತ್ಯಾಗ್ರಹ ಮುಂತಾದ ಚಳುವಳಿಗಳ ಚಿತ್ರಗಳನ್ನು ನೋಡಬಹುದು. ಗಾಂಧೀಜಿ ಅವರು ಬಹಳಷ್ಟು ಬಾರಿ ಕರ್ನಾಟಕ ರಾಜ್ಯಕ್ಕೆ  ಭೇಟಿ ನೀಡಿದ್ದರು. ಅವರ ವಿವಿಧ ಸಂದರ್ಭಗಳ 36 ಭೇಟಿಯ  ಅಪರೂಪದ ಚಿತ್ರಗಳು ಇಲ್ಲಿ ನೋಡಲು ಲಭ್ಯವಿರುತ್ತದೆ.  ಗಾಂಧೀಜಿ ಅವರು ಉಪಯೋಗಿಸುತ್ತಿದ್ದ ಟೋಪಿ, ಕನ್ನಡಕ, ಉರುಗೋಲು, ಚಪ್ಪಲಿಗಳ ಪ್ರತಿಕೃತಿಗಳನ್ನು  ಕಾಣಬಹುದು. ವಸ್ತುಪ್ರದರ್ಶನದಲ್ಲಿ ಗಾಂಧೀಜಿ ಅವರ ಜೀವನದ ವಿವಿಧ ಹಂತಗಳನ್ನು ಪರಿಚಯಿಸಿಕೊಡಲಾಗಿದೆ.

ಈ ವಸ್ತುಪ್ರದರ್ಶನದ ಕಲಾ ನಿರ್ದೇಶಕರಾಗಿ ರಘು ಅವರು ಕೆಲಸ ಮಾಡಿದ್ದಾರೆ. ಇವರೊಂದಿಗೆ ಕಲಾವಿದರಾದ ಆನಂದ ಕೃಷ್ಣ ರಂಗಸ್ವಾಮಿ, ವಿಷ್ಣು ಮಾಧವ್, ಆನಂದರಾಜ್, ಸೇರಿದಂತೆ  85 ಜನರು ಕಳೆದ 22 ದಿನಗಳಿಂದ ಅವಿರತವಾಗಿ ಶ್ರಮಿಸಿದ್ದಾರೆ. ಸಂಜಯ್ ಮಾರ್ಕೆಂಟಿಂಗ್ ಸಂಸ್ಥೆ ಈ ಮಳಿಗೆಯನ್ನು ನಿರ್ಮಿಸಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: