ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಾಲ ಮನ್ನಾ ಕುರಿತು ಪ್ರಧಾನಿಯನ್ನು ಒತ್ತಾಯಿಸಲಿದ್ದೇನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯವಾಗಿ ಬರದ ವಿಷಯ ಪ್ರಧಾನಿಯವರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದೇನೆ, ಮಹದಾಯಿ ಕುರಿತೂ ಚರ್ಚೆ ನಡೆಯಲಿದೆ. ಪ್ರಧಾನಿ ಭೇಟಿಯ ವೇಳೆ ಸಾಲಮನ್ನಾ ಕುರಿತು ಒತ್ತಾಯ ಮಾಡುತ್ತೇನೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಂಜನಗೂಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು  ಗುರುವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಕೇಳಿದ್ದೇವೆ. ಅವರು ಒಪ್ಪಿಕೊಳ್ಳಬಹುದು ಎಂದರು.  ಶ್ರೀನಿವಾಸ್ ಪ್ರಸಾದ್ ಅವರಿಗೆ ಬಿಜೆಪಿ ಸೇರಲು ಸರಿಯಾದ ಕಾರಣಗಳು ಸಿಗದ ಕಾರಣ ಹಾಗೂ ಬಿಜೆಪಿ ಸೇರಿದ್ದನ್ನು ಸಮರ್ಥಿಸಿಕೊಳ್ಳಲು ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿಂದೆ  ಯಡಿಯೂರಪ್ಪ ಅವರನ್ನು ಬಾಯಿಗೆ ಬಂದಂತೆ ಬೈದಿದ್ದರು ಎಂದರಲ್ಲದೇ, ಜನತಾಪಕ್ಷದಲ್ಲಿದ್ದಾಗ ನಾನು ಆಡ್ವಾಣಿಯವರನ್ನು ಭೇಟಿಯಾಗಿದ್ದೆ. ಅದನ್ನು ಬಿಟ್ಟರೆ ಮತ್ತೆ ಯಾವತ್ತೂ ಆಡ್ವಾಣಿಯವರನ್ನು ನಾನು ಭೇಟಿ ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಜನಾರ್ಧನ್ ಪೂಜಾರಿ ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಹೇಳಿಕೆಗೆ ನಾನೇನು ಪ್ರತಿಕ್ರಿಯಿಸುವುದಿಲ್ಲ. ಮಂಗಳೂರಿನಲ್ಲಿರುವ ಪೂಜಾರಿಯವರಿಗೆ ನಂಜನಗೂಡು ಕುರಿತು ಏನು ಗೊತ್ತಿದೆ, ಇಲ್ಲಿದ್ದವರಿಗೇ ಭವಿಷ್ಯ ಹೇಳಲು ಆಗುವುದಿಲ್ಲ. ಇನ್ನು ಅಲ್ಲಿ ಕುಳಿತು ಇಲ್ಲಿನ ಮತದಾರರ ಕುರಿತು ತಿಳಿದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅವರ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ ಅವರ ಹೇಳಿಕೆಯಿಂದ ಪಕ್ಷಕ್ಕೆ ಯಾವ ಡ್ಯಾಮೇಜು ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭ ಕಾಂಗ್ರೆಸ್ ನ ಮುಖಂಡರು ಮುಖ್ಯಮಂತ್ರಿಗಳ ಜೊತೆಗಿದ್ದರು.

Leave a Reply

comments

Related Articles

error: