ಕರ್ನಾಟಕಪ್ರಮುಖ ಸುದ್ದಿ

ದೇವೇಗೌಡರು ಪುಣ್ಯಪುರುಷ, ಎಚ್‍ಡಿಕೆ ರಾಷ್ಟ್ರಪತಿ ಆಗ್ತಾರೆ: ಜನಾರ್ದನ ಪೂಜಾರಿ

ಮಂಗಳೂರು (ಅ.15): ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ ಮಂಗಳೂರು ದಸರಾ ಮಹೋತ್ಸವವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಕುಮಾರಸ್ವಾಮಿ ಅವರು, ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ. ದಸರಾ ಉತ್ಸವವನ್ನು ಉದ್ಘಾಟಿಸಬೇಕೆಂದು ಜನಾರ್ದನ ಪೂಜಾರಿ ಅವರು ಕೇಳಿದಾಗ ಅವರ ಮಾತಿಗೆ ಗೌರವ ಕೊಟ್ಟು ಒಪ್ಪಿಕೊಂಡೆ. ಈ ಕ್ಷೇತ್ರದ ದೇವರ ಮೇಲೆ ನನಗೆ ಅಪಾರ ಭಕ್ತಿ ಎಂದರು.

ಕೆಲವರು ನವರಾತ್ರಿ, ದಸರಾ ಉತ್ಸವಕ್ಕೆ ಅಷ್ಟು ಬೇಕು, ಇಷ್ಟು ಬೇಕು ಎಂದು ಕೇಳುತ್ತಾರೆ. ಆದರೆ ಮಂಗಳೂರು ದಸರಾವನ್ನು ಯಾವುದೇ ಅನುದಾನ ಪಡೆಯದೇ ನಡೆಸುತ್ತಿರೋದು ಆಶ್ಚರ್ಯಕರ. ಮಂಗಳೂರು ದಸರಾ ವಿಶೇಷವಾಗಿದ್ದು, ಇದು ಜನತಾ ಉತ್ಸವ, ಜನತಾ ದಸರಾವಾಗಿದೆ ಎಂದು ಅಭಿಮಾನದ ಮಾತುಗಳನ್ನಾಡಿದರು. ದ.ಕ.‌ಜಿಲ್ಲೆಯಲ್ಲಿ ನಾನು ಬಡವರನ್ನೂ ಕಂಡಿದ್ದೇನೆ. ಶ್ರೀಮಂತರನ್ನೂ ಕಂಡಿದ್ದೇನೆ. ಆದರೆ ಜನರೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಪೂಜಾರಿಯವರ ಮೇಲೆ ವಿಶೇಷ ಗೌರವ: ಜನಾರ್ಧನ ಪೂಜಾರಿಯವರ ಮೇಲೆ ನನಗೆ ವಿಶೇಷ ಗೌರವವಿದೆ. ಕ್ಷೇತ್ರದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಕೊಡುಗೆ ನೀಡಿದರು. ನಾನು ಕಂಡ ಪ್ರಾಮಾಣಿಕ ರಾಜಕಾರಣಿ ಜನಾರ್ದನ ಪೂಜಾರಿ ಎಂದು ಗೌರವದ ಮಾತುಗಳನ್ನಾಡಿದರು.

ದೇವೇಗೌಡರನ್ನು ನೆನೆದ ಪೂಜಾರಿ: ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಸರಾ ಉದ್ಘಾಟಿಸಿದ್ದರಿಂದ ಎಂದಿಗೂ ಸಿಗದಂತಹ ತೃಪ್ತಿ ನನಗಿಂದು ದೊರಕಿದೆ. ದೇವೇಗೌಡರು ಎಲ್ಲಿ ನೋಡಿದರೂ ನನ್ನನ್ನು ಗುರುಗಳೇ ಅನ್ನುತ್ತಿದ್ದರು. ಕುದ್ರೋಳಿ ಕ್ಷೇತ್ರ ನಿರ್ಮಾಣವಾದ ಪರಿಯ ಬಗ್ಗೆ ಹೊಗಳುತ್ತಿದ್ದರು ಎಂದು ನೆನಪಿಸಿಕೊಂಡರು.

ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿ!: ಎಲ್ಲರಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಅದು ಪೂರ್ವಜನ್ಮದ ಪೂರ್ವಜರ ಪುಣ್ಯದಿಂದ ಸಾಧ್ಯ. ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಅವರಲ್ಲಿ ಸಹನೆ, ವಿನಯ ಇದೆ. ದೇಶದ ಚರಿತ್ರೆಯಲ್ಲಿ ದೇವೇಗೌಡರ ಪಾತ್ರ ಬಹಳ ದೊಡ್ಡದು. ದೇವೇಗೌಡರೇ, ನಿಮ್ಮ ಮಗ ನಮ್ಮ ದೇವಳಕ್ಕೆ ಬಂದು ದೇವರಿಗೆ ಕೈಮುಗಿದರು. ಕುಮಾರಸ್ವಾಮಿಯವರಲ್ಲಿ ನಾನು ವಿಶೇಷತೆ‌ಯನ್ನು ಕಂಡಿದ್ದೇನೆ. ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ ಎಂದು ಭವಿಷ್ಯ ನುಡಿದರು.

ಇಷ್ಟು ಮಾತ್ರವಲ್ಲ ಕುಮಾರಸ್ವಾಮಿ ರಾಷ್ಟ್ರಪತಿ ಆಗುವಾಗ ನಾನು ಇರಲ್ಲ. ಆದರೆ, ರಾಷ್ಟ್ರಪತಿಯಾದಾಗ ದೇವರ ಸಮ್ಮುಖದಲ್ಲಿ ಪೂಜಾರಿ ಹೇಳಿದ ಎಂದು ನೆನಪಿಸಿಕೊಳ್ಳಿ ಎಂದು ತಿಳಿಸಿದರು.

ಒಮ್ಮೆಯಾದರೂ ಜನಾರ್ಧನ ಪೂಜಾರಿಯಿಂದ ಬೈಸಿಕೊಳ್ಳುವ ಅಸೆ!: ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಜೀವನದಲ್ಲಿ ಒಮ್ಮೆಯಾದರೂ ಜನಾರ್ಧನ ಪೂಜಾರಿಯಿಂದ ಬೈಸಿಕೊಳ್ಳೋ ಅಸೆಯಿದೆ. ಅವರು ಬೈದಲ್ಲಿ ಆಶೀರ್ವಾದ ನೀಡಿದಂತೆ ಎಂದು ಅಭಿಪ್ರಾಯಪಟ್ಟರು!

ಅದ್ಭುತ ದಸರಾ ಉತ್ಸವವೆಂದರೆ ಮಂಗಳೂರು ದಸರಾ. ಜಗತ್ತಿನಲ್ಲಿದ್ದ ಆಧುನಿಕ ಬ್ರಹ್ಮನೆಂದು ನಾರಾಯಣಗುರು ಗುರುತಿಸಿಕೊಂಡಿದ್ದರು. ನಾರಾಯಣಗುರುಗಳ ಆದರ್ಶ ಪ್ರತಿಪಾದಿಸುವ ವ್ಯಕ್ತಿಯೆಂದರೆ ಜನಾರ್ಧನ ಪೂಜಾರಿ ಎಂದು ಪ್ರಶಂಸಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜನಾರ್ದನ ಪೂಜಾರಿ ಅವರು ಸಿಎಂ ಕುಮಾರಸ್ವಾಮಿಗೆ ಸ್ವಾಗತ ಕೋರಲು ದೇವಾಲಯದ ಹೊರಗೆ ಮಳೆಯಲ್ಲಿ ಕೊಡೆಹಿಡಿದು ಕಾದು ಕುಳಿತದ್ದು ವಿಶೇಷ. (ಎನ್.ಬಿ)

Leave a Reply

comments

Related Articles

error: