ಮೈಸೂರು

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದು ಸರಿಯೇ?

ಮೈಸೂರು, ಅ.15: – ಇತ್ತೀಚೆಗೆ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಳಬರನ್ನು, ಅನುಭವಸ್ಥರನ್ನು ಕಡೆಗಣಿಸಿ ಹೊಸಬರಿಗೆ ಮಣೆ ಹಾಕಿರುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇದು ಮಲತಾಯಿ ಧೋರಣೆಯಲ್ಲದೇ ಮತ್ತೇನು? ನಾವು ದಸರಾ ಪ್ರಾರಂಭವಾಗುವುದಕ್ಕೆ ಒಂದು ತಿಂಗಳ ಮುಂಚೆ ಅರ್ಜಿಗಳನ್ನು ಸಲ್ಲಿಸುತ್ತೇವೆ. ಆದರೆ ಕಣ್ಣೊರೆಸುವ ತಂತ್ರ ಎಂಬಂತೆ ಮೊದಲೇ ಎಲ್ಲ ಬುಕ್ ಮಾಡಿಕೊಂಡಿರುತ್ತಾರೆ. ಪ್ರತಿ ಸಲ ನಾವು ಅರ್ಜಿ ಸಲ್ಲಿಸಲು ಹೋದಾಗ ಈ ಸಲ ನಿಮಗೆ ಖಂಡಿತಾ ಅವಕಾಶ ಕಲ್ಪಿಸುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಾರೆ. ಮೊನ್ನೆ ದಿವಸ ಕುವೆಂಪುನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಒಂದು ಸಂಚಾರಿ ವಾಹನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಜ್ಞಾನವೇ ಇಲ್ಲದ ಕಲಾವಿದರಿಗೆ ಅವಕಾಶ ಕೊಟ್ಟು ಹಳಬರಿಗೆ ಅವಮಾನ ಮಾಡಿರುತ್ತಾರೆ. ಅವರು ಎಷ್ಟು ಕೆಟ್ಟದಾಗಿ ಶೃತಿ, ತಾಳ, ರಾಗ, ಲಯ ಇಲ್ಲದೇ ಹಾಡಿದರು ಎಂದರೆ ಆ ಭಗವಂತನೇ ಅವರನ್ನು ಮೆಚ್ಚಬೇಕು.

ಅವರವರ ಯೋಗ್ಯತೆಗೆ ತಕ್ಕ ಹಾಗೆ ಅವಕಾಶ ಕಲ್ಪಿಸಲಿ. ಅದನ್ನು ಬಿಟ್ಟು ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಸಂಗೀತದಲ್ಲಿ ಅ.ಆ.ಇ.ಈ. ಗೊತ್ತಿಲ್ಲದ ಹೊಸಬರಿಗೆ ಅವಕಾಶ ಕೊಟ್ಟು ವಿಶ್ವವಿಖ್ಯಾತ ದಸರಾ ಶೋಭೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಈಗಿನ ಮುಖ್ಯಮಂತ್ರಿಗಳು ಸ್ಥಳೀಯರಿಗೆ ಹೆಚ್ಚು ಅವಕಾಶ ಕಲ್ಪಿಸಿ, ಅವರನ್ನು ಬೆಳೆಸಿ ಎಂದು ಹೇಳಿದ್ದರು. ಅವರ ಮಾತನ್ನೂ ಪರಿಗಣಿಸದೇ ಹೊರಗಿನವರನ್ನು ಕರೆತಂದು ಕೆಟ್ಟದಾಗಿ ಹಾಡುವ ಕಲಾವಿದರಿಗೆ ಅವಕಾಶ ಕಲ್ಪಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರು ಇಡೀ ಕಲಾವಿದರ ಸಮೂಹವನ್ನು ಹಾಳು ಮಾಡುತ್ತಿದ್ದಾರೆ. ಅಲ್ಲದೇ ಸಂಗೀತ ಬಲ್ಲದವನಿಗೆ ಉಸ್ತುವಾರಿಯನ್ನು ಕೊಟ್ಟು ಬೇಕಾದವರಿಗೆಲ್ಲ ಕಾರ್ಯಕ್ರಮ ನೀಡಿ ಕಲೆಗೆ ಬೆಲೆ ಕೊಡುವ ಕಲಾವಿದರನ್ನು ಕಡೆಗಣಿಸಿದ್ದಾರೆ. ದಸರಾ ಮಹೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಲಾವಿದರಿಗೆ ಎಂತಹ ಅರ್ಹತೆ ಇರಬೇಕೆಂಬುದನ್ನು ಸಹಾಯಕ ನಿರ್ದೇಶಕರೇ ತಿಳಿಸಬೇಕು. ಇನ್ನು ಮುಂದಾದರೂ ಅನುಭವಸ್ಥ ಕಲಾವಿದರಿಗೆ ಅವಕಾಶ ಕೊಟ್ಟು ಈಗ ಮಾಡಿರುವ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲಿ ಎಂದು ಮೈಸೂರು ನಗರ ನೊಂದ ಕಲಾವಿದರ ಸಂಘ ಆಗ್ರಹಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: