ಕರ್ನಾಟಕಪ್ರಮುಖ ಸುದ್ದಿ

ಅಧಿಕಾರಿಗಳು ಸರ್ಕಾರ ಬೀಳುತ್ತದೆ ಎಂಬ ಭ್ರಮೆಯಲ್ಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಗಳೂರು (ಅ.15): ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಅಧಿಕಾರಿಗಳು ನನ್ನ ವೇಗಕ್ಕೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳೂ ಕೂಡ ಸರ್ಕಾರ ಬಿದ್ದುಹೋಗುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳೂರಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬ್ರ್ಯಾಂಡ್ ಮಂಗಳೂರು ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಅಕೌಂಟ್ ನಲ್ಲಿ ಹತ್ತು ಸಾವಿರ ಕೋಟಿ ಇದೆ. ರಾಜ್ಯದ ರೈತರ ಸಾಲಮನ್ನಾ ಮಾಡಿಯೂ ಹಣದ ಕೊರತೆ ಆಗಿಲ್ಲ. ರಾಜ್ಯದ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದರು.

ಪ್ರತಿಪಕ್ಷ ನಾಯಕರು ದೀಪಾವಳಿಗೆ ಸರ್ಕಾರ ಬೀಳುತ್ತದೆ ಅನ್ನುವ ಕನಸು ಕಾಣುತ್ತಿದ್ದಾರೆ. ರಾಜ್ಯ ಸರಕಾರ ನವೆಂಬರ್ 8 ಕ್ಕೆ ಬಿದ್ದೇ ಹೋಗುತ್ತದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಹತ್ತಕ್ಕೆ ಬಿಜೆಪಿ ಸರಕಾರ ಬರುತ್ತೆ ಅಂತ ಯಾರೋ ಹೇಳಿದ್ದಾರಂತೆ. ಕೆಲವು ತಿಳಿಗೇಡಿಗಳು ಹೀಗೆ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಹೀಗೆ ಗಡುವು ವಿಧಿಸುವ ಕೆಲಸ ಆಗಾಗ ನಡೆಯುತ್ತಲೇ ಇದೆ. ನಮ್ಮ ಸರಕಾರ ಭದ್ರವಾಗಿದೆ. ಅಲುಗಾಡಿಸಲು ಸಾಧ್ಯವಿಲ್ಲ. ಮಾಧ್ಯಮಗಳಿಗೆ ಮನವಿ ಮಾಡುತ್ತಿದ್ದೇನೆ. ವಾಸ್ತವಾಂಶ ಏನು ಬೇಕಾದ್ರೂ ಹೇಳಿ. ಆದರೆ ಸುಮ್ನೆ ಈ ವದಂತಿಗಳನ್ನು ಹಬ್ಬಿಸಿ ಗೊಂದಲ ಸೃಷ್ಟಿಸಬೇಡಿ ಎಂದರು.

ಇದೇ ಅಕ್ಟೋಬರ್ 17 ರಂದು ಕೊಡಗಿಗೆ ಭೇಟಿ ನೀಡುತ್ತೇನೆ. ಇಡೀ ದಿನ ಕೊಡಗಿನ ಜನರೊಂದಿಗೆ ಕಳೆಯುತ್ತೇನೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ. ಭೂಮಿ, ಮನೆ ಕಳೆದುಕೊಂಡ ಸಂತ್ರಸ್ತರ ಜೊತೆ ಇಡೀ ದಿನ ಕಳೆಯುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು. (ಎನ್.ಬಿ)

Leave a Reply

comments

Related Articles

error: