ಮೈಸೂರು

ಕುವೆಂಪು ಸಂದೇಶಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲ : ಸೋಮಶೇಖರ್ ಬೇಸರ

kala-webಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರು ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳ ವಿರುದ್ಧ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಅವರ ಆಚಾರ ವಿಚಾರಗಳು, ಸಂದೇಶಗಳು ಅನುಷ್ಠಾನಕ್ಕೆ ಬಾರದೆ ಇರುವುದು ಸಮಾಜದ ದೌರ್ಭಾಗ್ಯ ಎಂದು ಶಾಸಕ ಎಂ.ಕೆ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ಅವರ 112ನೇ ಜನ್ಮದಿನದ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯನ್ನು ಎಂ.ಕೆ.ಸೋಮಶೇಖರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನುಜ ಮತ ವಿಶ್ವಪಥ, ಭೂಮಿ ಮೇಲಿರುವ ಎಲ್ಲರೂ ಒಂದೇ. ನಮ್ಮಲ್ಲಿ ಭೇದಭಾವಗಳಿಲ್ಲ ಎಂದು ವಿಶ್ವಕ್ಕೆ ವಿಶ್ವಮಾನವ ಸಂದೇಶ ಸಾರಿದ ಮಹಾನ್ ಕವಿ ಕುವೆಂಪು. ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ, ಆಚಾರ ವಿಚಾರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದರು. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಾವುಗಳು ವಿಫಲರಾಗಿದ್ದೇವೆ. ಇಂದಿಗೂ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸಗಳಾಗುತ್ತಿವೆ. ಸ್ವಾರ್ಥ ಸಾಧನೆಗಾಗಿ ಸಂಕುಚಿತ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ವಿಷಾದಿಸಿದರು.

ಭಾಷಣ ಕೇಳಿದ ಖಾಲಿ ಕುರ್ಚಿಗಳು: ಸರ್ಕಾರದ ವತಿಯಿಂದ ಆಯೋಜಿಸುವ ಮಹನೀಯರ ಜಯಂತಿಗಳಿಗೆ ಸಾರ್ವಜನಿಕರು ಬರುವುದಿಲ್ಲ ಎಂಬುದಕ್ಕೆ ಕಲಾಮಂದಿರ ಮತ್ತೊಮ್ಮೆ ಸಾಕ್ಷಿಯಾಯಿತು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕುವೆಂಪು ಅವರ ಜಯಂತಿಯಲ್ಲಿ ಜನರೇ ಇರಲಿಲ್ಲ. ಇಡೀ ಕಲಾಮಂದಿರವೇ ಖಾಲಿ ಖಾಲಿಯಾಗಿತ್ತು. ಬೆರಳೆಣಿಕೆಯಷ್ಟು ಸಾರ್ವಜನಿಕರನ್ನು ಬಿಟ್ಟರೆ ಖಾಲಿ ಕುರ್ಚಿಗಳು ಅತಿಥಿಗಳ ಭಾಷಣ ಕೇಳುತ್ತಿದ್ದವು.

ಕುವೆಂಪು ಅವರ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹೆಚ್.ಜೆ.ಲಕ್ಕಪ್ಪಗೌಡ, ಉಪಮೇಯರ್ ರತ್ನ ಲಕ್ಷ್ಮಣ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ, ಪಾಲಿಕೆ ಸದಸ್ಯ ಪ್ರಶಾಂತ್‍ಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: