ಮೈಸೂರು

ಹಸಿವೆಯ ನಿವಾರಣೆಗೆ ಕೇವಲ ಆಹಾರ ಧಾನ್ಯಗಳ ಉತ್ಪಾದನೆಯೊಂದೇ ಮಾರ್ಗವಲ್ಲ : ಪ್ರೊ. ಡಾ.ಕುಮಾರಸ್ವಾಮಿ ಎ ಎಸ್

ಮೈಸೂರು, ಅ.16:- ಹಸಿವೆಯ ನಿವಾರಣೆಗೆ ಕೇವಲ ಆಹಾರ ಧಾನ್ಯಗಳ ಉತ್ಪಾದನೆಯೊಂದೇ ಮಾರ್ಗವಲ್ಲ. ಉತ್ಪಾದಿತ ಆಹಾರ ಧಾನ್ಯಗಳ ಸರಿಯಾದ ಸಂಗ್ರಹಣೆ, ಸಂರಕ್ಷಣೆ, ಹಂಚಿಕೆ ಎಲ್ಲಾ ಪ್ರದೇಶಗಳಲ್ಲಿಯೂ ಅವುಗಳ ಲಭ್ಯತೆ ಆಯಾ ಕಾಲಕ್ಕೆ ಪ್ರಚಲಿತ ಬೆಲೆಗಳು, ಬಳಕೆದಾರನ ಕೊಳ್ಳುವ ಶಕ್ತಿ, ದುರ್ಬಲ ವರ್ಗದ ರಕ್ಷಣೆಗೆ ಇರುವ ರಾಜನೀತಿಗಳು ಮುಂತಾದ ಅಂಶಗಳು ಮಹತ್ವ ವಹಿಸುತ್ತವೆ ಎಂದು ನಿವೃತ್ತ ಕೃಷಿ ವಿಜ್ಞಾನಿ ಪ್ರೊ. ಡಾ.ಕುಮಾರಸ್ವಾಮಿ ಎ ಎಸ್ ತಿಳಿಸಿದರು.

ವಿಶ್ವ ಆಹಾರ ದಿನದ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗದ ವತಿಯಿಂದ ಯುವರಾಜ ಕಾಲೇಜಿನಲ್ಲಿಂದು ಆಯೋಜಿಸಲಾದ ಆಹಾರ ವಿಜ್ಞಾನ ಹಸಿವು ಮುಕ್ತ ಜಗತ್ತಿನೆಡೆಗೆ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು. ಖಾಲಿಯಿರುವ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಮಿದುಳು ನೀಡುವ ಪ್ರೇರಣೆಯೇ ಹಸಿವು. ಹಸಿವು ಒಂದು ವೈಯುಕ್ತಿಕ ಅನುಭವ. ಆಹಾರದ ಗುಣಮಟ್ಟವು ಸಂಪೂರ್ಣವಾಗಿರದೇ ನಿರ್ದಿಷ್ಟ ಪೋಷಕಾಂಶಗಳ ಕೊರತೆಯಿದ್ದರೆ ಹಸಿವು ನೇರವಾಗಿ ಅನುಭವವಾಗದಿದ್ದರೂ ಸಹ ಅಪೌಷ್ಟಿಕತೆಯಿಂದ ದೇಹವು ದೀರ್ಘಕಾಲೀನ ಬಳಲಿಕೆಗೊಳಗಾಗುತ್ತದೆ ಎಂದರು. ಜನರ ದುಡಿಮೆಯ ಸಾಮರ್ಥ್ಯಕ್ಕೆ ಸರಿಯಾಗಿ ಸುಲಭ ಬೆಲೆಗೆ ಮಾರುಕಟ್ಟೆಯಲ್ಲಿ ಆಹಾರವು ದೊರೆಯುವಂತೆ ನೋಡಿಕೊಳ್ಳಬೇಕಾಗಿರುವುದು ಆಡಳಿತ ನಡೆಸುವ ಸರ್ಕಾರಗಳ ಜವಾಬ್ದಾರಿ. ಇದಕ್ಕೆ ಸರ್ಕಾರಗಳು ಸಂತುಷ್ಟ ಕೃಷಿಕರನ್ನುಳ್ಳ ಸುಸ್ಥಿರ ಕೃಷಿ ಉತ್ಪಾದನಾ ವ್ಯವಸ್ಥೆಯನ್ನೂ ಹೊಂದಿರಬೇಕು. ಕೃಷಿ ವ್ಯವಸ್ಥೆಯನ್ನು ಸದೃಢಗೊಳಿಸಿ ಸ್ಥಳೀಯವಾಗಿಯೇ ತಮಗೆ ಬೇಕಾದ ಪ್ರಮಾಣದಲ್ಲಿ ಆಹಾರ ಉತ್ಪಾದಿಸುವ ಶಕ್ತಿಯನ್ನು ತುಂಬಬೇಕೇ ಹೊರತು ಕೃಷಿ ವ್ಯವಸ್ಥೆಯು ದುರ್ಬಲವಾಗಲು ಬಿಡಬಾರದು. ಕೃಷಿ ವ್ಯವಸ್ಥೆಯನ್ನು ಬಲಪಡಿಸದೇ ಹೊರ ದೇಶಗಳಿಂದ/ ರಾಜ್ಯಗಳಿಂದ ಆಹಾರವನ್ನು ಆಮದು ಮಾಡಿಕೊಂಡು ಜನರಿಗೆ ಆಹಾರ ಸುರಕ್ಷತೆಯನ್ನು ನೀಡಿದರೆ ಲಾಭಕರ ಬೇಡಿಕೆಯ ಕೊರತೆಯಿಂದಾಗಿ ಸ್ಥಳೀಯ ಕೃಷಿ ವ್ಯವಸ್ಥೆಯು ಇನ್ನಷ್ಟು ದುರ್ಬಲವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಆಹಾರ ಸುರಕ್ಷತೆಯ ಕಾರ್ಯಕ್ರಮವು  ಸ್ಥಳೀಯವಾಗಿ ರೂಢಿಯಲ್ಲಿರುವ ಆಹಾರ ಅಭ್ಯಾಸಕ್ಕನುಗುಣವಾಗಿ ಇರಬೇಕು. ಇಲ್ಲದಿದ್ದರೆ ಸ್ಥಳೀಯ ಬೆಳೆಗಳು ಕ್ರಮೇಣ ಹಿನ್ನೆಲೆಗೆ ಸರಿಯುತ್ತವೆ. ಜನಸಾಮಾನ್ಯರಿಗೆ ಆಹಾರ ಧಾನ್ಯಗಳು ನಿಕೃಷ್ಟ ಬೆಲೆಗೆ ದೊರೆಯುವಂತಾಗಬಾರದು. ಪ್ರತಿಯೊಬ್ಬ ನಾಗರಿಕನಿಗೂ ತಾನು ಸೇವಿಸುವ ಆಹಾರದ ನಿಜ ಬೆಲೆ ಗೊತ್ತಿರಬೇಕು. ಕಷ್ಟಪಟ್ಟುಬೆಳೆದ ರೈತನಿಗೆ ತಾನು ಬೆಳೆದ ಆಹಾರ ಧಾನ್ಯಗಳು ಹಾಳು ಅಗ್ಗದ ಬೆಲೆಗೆ ದೊರೆತರೆ ಎಷ್ಟು ವ್ಯಥೆಯಾಗಬಹುದೆಂಬುದು ಯೋಚಿಸಬೇಕಾದ ವಿಷಯವಾಗಿದೆ. ಅತಿ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಕೊಟ್ಟಾಗ ಬಳಕೆದಾರರಿಗೆ ಆಹಾರದ ನಿಜವಾದ ಬೆಲೆ ಗೊತ್ತಾಗುವುದಿಲ್ಲ. ದುರ್ಬಳಕೆಯಾಗುವ ಸಾಧ್ಯತೆಯೇ ಹೆಚ್ಚು. ಬೆಳೆದ ರೈತನಿಗೂ ಉತ್ತಮ ಬೆಲೆ ದೊರಕಿಸಿಕೊಡುವುದು ಕಷ್ಟವಾಗಬಹುದು. ಆಹಾರ ಮತ್ತು ಕೃಷಿ ಸಂಸ್ಥೆಯು ಜಗತ್ತಿನಾದ್ಯಂತ ವ್ಯಾಪಕವಾಗಿರುವ ಹಸಿವೆಯ ನಿವಾರಣೆಗೆ ಪಣ ತೊಟ್ಟಿವೆ. ಕ್ರಿ.ಶ.2030ರಲ್ಲಿ ಜಗತ್ತನ್ನು ಹಸಿವು ಮುಕ್ತ ಮಾಡುವ ಸಂಕಲ್ಪ ಹೊತ್ತು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಸಿವೆಯ ಸಮಸ್ಯೆಯು ನಿರಂತರ. ಜಗತ್ತಿನಿಂದ ಹಸಿವೆಯನ್ನು ನಿವಾರಣೆ ಮಾಡುತ್ತೇವೆ ಎನ್ನುವುದು ಭ್ರಮೆ. ಆದರೂ ಹಸಿವೆಯ ಸಂಕಷ್ಟಗಳನ್ನು ಕಡಿಮೆ ಮಾಡುವ ಮಹತ್ತರ ಜಾಗತಿಕ ಪ್ರಯತ್ನಗಳಿಗೆ ಕೈಜೋಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಯ್ಯ ಎಂ, ಆಡಳಿತಾಧಿಕಾರಿ ಡಾ.ದೇವರಾಜೇ ಗೌಡ ಹೆಚ್.ಸಿ, ಆಹಾರ ವಿಜ್ಞಾನ ವಿಭಾಗದ ಕನ್ವೀನರ್ ಡಾ.ಶೇಖರ್ ನಾಯ್ಕ್ ಆರ್, ಡಾ.ಪ್ರೇಮವಲ್ಲಿ ಕೆ.ಎಸ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: