ಮೈಸೂರು

ಸರ್ಕಾರಿ,ಖಾಸಗಿ ಶಾಲೆಗಳ ತಾರತಮ್ಯ ನೀತಿ ನಿವಾರಣೆ : ಶಾಸಕ ಸಾ.ರಾ.ಮಹೇಶ್ ಭರವಸೆ

ಕಾಲ್ಪನಿಕ ವೇತನ ನಿಗದೀಕರಣಕ್ಕಾಗಿ ಅನುದಾನಿತ ಶಾಲೆಗಳ ಶಿಕ್ಷಕರು ಪ್ರತಿ ವರ್ಷ ಹೋರಾಟ ನಡೆಸುವುದು ಸೂಕ್ತವಲ್ಲವೆಂದು ಶಾಸಕ ಸಾ.ರಾ.ಮಹೇಶ್ ತಿಳಿಸಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ತಾರತಮ್ಯ ನೀತಿ ನಿವಾರಣೆಯ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಮಾತುಕತೆ ನಡೆಸುವ ಭರವಸೆಯನ್ನು ನೀಡಿದರು.

ಗುರುವಾರ, ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2017ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕು, ಇಂದಿನ ಕೆಲಸವನ್ನು ಇಂದೇ ಮಾಡು ಎಂದು ದಿನದರ್ಶಿಕೆ ಸೂಚಿಸುವುದು ಅದರಂತೆ ಪ್ರತಿಯೊಬ್ಬರು ನಡೆದರೆ ಬದುಕು ಸುಂದರವಾಗಿರುವುದು ಎಂದು ತಿಳಿಸಿದರು.

ಮನುಷ್ಯನ ಜೀವನದಲ್ಲಿ ದಿನದರ್ಶಿಕೆಗಳು ಮಾರ್ಗದರ್ಶಿಗಳಿದ್ದಂತೆ, ಜೀವನದಲ್ಲಿ ಯಾವುದನ್ನಾದರೂ ಮರೆಯಬಹುದು ದಿನಾಂಕವನ್ನು ಮರೆಯಲೂ ಸಾಧ್ಯವಿಲ್ಲ ಹಾಗೂ ಕ್ಯಾಲೆಂಡರ್ ವಿಷಯದಲ್ಲಿ ಕೆಂಪು ಬಣ್ಣ ಖುಷಿ ನೀಡುವುದು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಕೆ.ಆರ್. ಮಾತನಾಡಿ ಸಮಾಜದಲ್ಲಿ ಏಕರೂಪ ಶಿಕ್ಷಣ ಜಾರಿಯಾಗಬೇಕು, ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ವಿಷಯದಲ್ಲಿಯೂ ತಾರತಮ್ಯವಿದ್ದು ಅನುದಾನಿತ ಶಾಲಾ ಮಕ್ಕಳಿಗೆ ಸರ್ಕಾರ ಮಲತಾಯಿ ದೋರಣೆ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುವಂತೆ ಸಮವಸ್ತ್ರ, ಪುಸ್ತಕ, ಶೂ, ಕ್ಷೀರಭಾಗ್ಯ ಯೋಜನೆಯನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದಿಂದ ವಿವಿಧ ಬೇಡಿಕೆಗಳ ಮನವಿಪತ್ರವನ್ನು ಶಾಸಕ ಸಾ.ರಾ.ಮಹೇಶ್ ಅವರಿಗೆ ಸಲ್ಲಿಸಲಾಯಿತು.

ಬೇಡಿಕೆಗಳು : ಹೊರಟ್ಟಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಿ, 2006ರ ನಂತರ ಸೇವೆಗೆ ಸೇರಿದ ಶಿಕ್ಷಕರಿಗೆ ಎನ್.ಪಿ.ಎಸ್ ಸೌಲಭ್ಯ, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಅವಧಿಯನ್ನು 10 ವರ್ಷಗಳಿಗೆ ನಿಗದಿಗೊಳಿಸಿ ಎನ್ನುವ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಸಂಘದಿಂದ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ‍್ಯಕ್ಷೆ ಇಂದುಮತಿ, ಜಿಲ್ಲಾಧ್ಯಕ್ಷ ಟಿ.ಪಿ.ನಂದೀಶ್ ಕುಮಾರ್, ಸ್ಪಿನ್ ಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: