ಪ್ರಮುಖ ಸುದ್ದಿಮೈಸೂರು

ಕುವೆಂಪು ಭವಯಾನ-ಭಾವಯಾನ : ಭರತಖಂಡದಲ್ಲಿ ವ್ಯಾಪಕ ವಿಮರ್ಶೆ ಆಗಿರುವ ಸಾಹಿತ್ಯ ಕುವೆಂಪು ಅವರದ್ದು; ವೆಂಕಟಾಚಲಶಾಸ್ತ್ರೀ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸುವರ್ಣ ಮಹೋತ್ಸವ ಸ್ಮರಣೆ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕುವೆಂಪು ಕಾವ್ಯಾಧ್ಯಯನ ಪೀಠ ಸಹಯೋಗದೊಂದಿಗೆ ಗುರುವಾರ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ 113 ನೇ ಕುವೆಂಪು ಜನ್ಮದಿನೋತ್ಸವ ವಿಚಾರ ಸಂಕಿರಣ-2016 ‘ಕುವೆಂಪು : ಭವಯಾನ – ಭಾವಯಾನ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರೀ ಅವರು, “ಕುವೆಂಪು ಅವರ ಕುರಿತಾಗಿ ನಿರ್ಮಾಣವಾಗಿರುವಷ್ಟು ಸಾಹಿತ್ಯ ಇಡೀ ಭರತಖಂಡದಲ್ಲಿ ಯಾವ ಕವಿಯ ಬಗ್ಗೆಯೂ ಇಷ್ಟೊಂದು ವ್ಯಾಪಕವಾಗಿ ವಿಮರ್ಶೆ ಆಗಿರಲು ಸಾಧ‍್ಯವಿಲ್ಲ. ಕುವೆಂಪು ಅವರ ಭವಯಾನ ಅವರ ಭವ್ಯವಾದ ಯಾನವಾಗಿದೆ. ಸಮಾಧಾನದ ಭಾವ ತುಂಬಿಕೊಟ್ಟಿದೆ ಎಂದು ಹೇಳಿದರು.

ದ.ರಾ.ಬೇಂದ್ರೆ, ಕುವೆಂಪು ಮತ್ತು ಪುತಿನ ಹೊಸಗನ್ನಡ ಕವಿರತ್ನತ್ರಯರು ಎಂದು ಖ್ಯಾತರಾಗಿದ್ದಾರೆ. ಅದಕ್ಕೆ ಪೂರಕವಾಗಿ ಬೇಂದ್ರೆ ಅವರು ಹಾರುವ ಹಕ್ಕಿಯಾಗಿ, ಕುವೆಂಪು ಅವರು ಏರುವ ಗಿಡುಗವಾಗಿ, ಪುತಿನ ಅವರು ಹಾಡುವ ಹಂಸವಾಗಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ ಎಂದರು. ಕುವೆಂಪು ಅವರ ಶಿಷ್ಯರಾಗಿ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಕುವೆಂಪು ಅವರಿಂದ ಕಲಿತ ಸಾಹಿತ್ಯ ತರಗತಿಗಳ ಅನುಭವಗಳನ್ನು ಹಂಚಿಕೊಂಡರು.

ನಂತರ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ “‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದು ಹೇಳಿದ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅಂತಹ ಮಹಾನ್ ಸಾಹಿತಿ ಸಿಗುವುದು ತುಂಬಾ ಕಷ್ಟ. ಕುವೆಂಪು ಅವರು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಪ್ರಶಸ್ತಿಗಳೇ ಅವರ ಬೆನ್ನತ್ತಿ ಬರುತ್ತಿದ್ದವು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.

ಅವರು ಸಾರಿದ ವಿಶ್ವಮಾನವ ಸಂದೇಶ ವಿಶ್ವದ ಶಾಂತಿ ಕಾಪಾಡುವ ಭವ್ಯ ಸಂದೇಶವಾಗಿದೆ. ಎಲ್ಲರೂ ಸ್ಮರಿಸಿ ಆಚರಿಸಬೇಕು. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಹೊರಟ ಮಹಾನ್ ವ್ಯಕ್ತಿತ್ವ ಅವರದು. ಅಂದು ಮಾನಸಗಂಗೋತ್ರಿಯ ಹುಟ್ಟಿಗೆ ಕಾರಣಕರ್ತರಾದ ಅವರನ್ನು ಹಲವಾರು ಜನ ಟೀಕಿಸಿದರು, ವಿಮರ್ಶೆ ಮಾಡಿದರು. ಆದರೆ ಕುವೆಂಪು ಅವರು ಹೆದರಿ ಕೈಕಟ್ಟಿಕೊಂಡು ಕೂರಲಿಲ್ಲ. ಬದಲಾಗಿ ತಮ್ಮ  ಕನಸಿನ ಕೂಸನ್ನು  ಕಟ್ಟಿದರು. ಇಂದು ಆ ಕೂಸು ಒಂದು ಮಹೋನ್ನತ ಸಂಸ್ಥೆಯಾಗಿ ಬೆಳೆಯುತ್ತಿದೆ. ಕುವೆಂಪು ಕನ್ನಡ ಅಧ‍್ಯಯನ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರೊ.ಡಿ.ಕೆ.ರಾಜೇಂದ್ರ ಅವರು ಬರೆದಿರುವ ‘ಕುವೆಂಪು ಆಯ್ದ ಕವನಗಳ ತೌಲನಿಕ ವಿಮರ್ಶೆ’, ಪ್ರೊ.ಸಿ.ನಾಗಣ್ಣ ಅವರ ‘ಕುವೆಂಪು ಧ‍್ಯಾನದಲ್ಲಿ’ ಹಾಗೂ ‘Cosmic Thoughts From Kuppali’ ಎಂಬ 3 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ರಾಷ್ಟ್ರಕವಿ ಕುವೆಂಪು ಬಹುಮಾನ, ಸುವರ್ಣ ಮಹೋತ್ಸವ ಬಹುಮಾನ ಪುರಸ್ಕೃತರು ಮತ್ತು ಕನ್ನಡ ವಿಷಯ ವಿಶ್ವಕೋಶ ಕರ್ನಾಟಕ ಸಂಪುಟ-1 ಇಂಗ್ಲೀಷ್ ಅನುವಾದದ ಸಂಪಾದಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪ್ರೊ.ಡಿ.ಕೆ ರಾಜೇಂದ್ರ, ಪ್ರೊ.ಸಿ.ನಾಗಣ್ಣ, ಪ್ರೊ.ಪೃಥ್ವೀಚಂದ್ರ ದತ್ತಶೋಭಿ(ಕೆಎಸ್ಓಯು), ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರ್ ಕುಮಾರ್, ಪ್ರೊ.ಎ.ಸಿ.ಲಲಿತಾ, ಡಾ.ಎಸ್.ಡಿ.ಶಶಿಕಲಾ, ಪ್ರೊ.ಡಿ.ಎ.ಶಂಕರ್, ಡಾ.ಹೆಚ್.ಟಿ.ಕೃಷ್ಣೇಗೌಡ ಮತ್ತಿತರು ಉಪಸ‍್ಥಿತರಿದ್ದರು.

Leave a Reply

comments

Related Articles

error: