
ಮೈಸೂರು
“ವಿಶ್ವಾಸ ಕಿರಣ” ಕಾರ್ಯಕ್ರಮಕ್ಕೆ ಶಾಸಕ ಎಸ್ ಎ ರಾಮದಾಸ್ ಚಾಲನೆ
ಮೈಸೂರು,ಅ.16:- ಲಕ್ಷ್ಮೀಪುರಂ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಎ ರಾಮದಾಸ್ ಅವರ ಚಿಂತನೆಯಾದ “ಹಸಿರು ಭಾರತ- ಸಧೃಡ ಭಾರತ” ಕಾರ್ಯಕ್ರಮದ ಜೊತೆಗೆ 10 ನೇ ತರಗತಿಯಲ್ಲಿ ಓದುತ್ತಿರುವ ಮೈಸೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರಿ ಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ವಿಶೇಷವಾಗಿ ಮಕ್ಕಳಿಗೆ ಕ್ಲಿಷ್ಟವಿಷಯಗಳಲ್ಲಿ ಪ್ರತಿ ಶನಿವಾರ ಲಕ್ಷ್ಮೀಪುರಂ ಶಾಲೆಯಲ್ಲಿ ತರಬೇತಿಯನ್ನು ನೀಡುವ “ವಿಶ್ವಾಸ ಕಿರಣ” ಕಾರ್ಯಕ್ರಮಕ್ಕೆ ಶಾಸಕ ಎಸ್ ಎ ರಾಮದಾಸ್ ಇಂದು ಮಕ್ಕಳೊಂದಿಗೆ ಸಂವಾದ ನಡೆಸುವ ಮೂಲಕ ಚಾಲನೆ ನೀಡಿದರು.
ತರಬೇತಿ ಕಾರ್ಯಕ್ರಮವನ್ನು ದಸರಾ ರಜೆಯ ಸಮಯದಲ್ಲಿ ಬೆಳಗಿನ ಹೊತ್ತು ನಡೆಸಲಾಗುತ್ತದೆ. ರಜೆ ಮುಗಿದ ಬಳಿಕ ಮಧ್ಯಾಹ್ನ 1 ರಿಂದ ಸಂಜೆ 5 ರ ತನಕ ಸಮಯವನ್ನು ನಿಗದಿ ಪಡಿಸಲಾಗಿದೆ. ಈ ಸಮಯದಲ್ಲಿ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಶಾಸಕ ಎಸ್ ಎ ರಾಮದಾಸ್ ತಿಳಿಸಿದರು. “ಹಸಿರು ಭಾರತ- ಸಧೃಡ ಭಾರತ” ಕಾರ್ಯಕ್ರಮದ ಸೇವಾಕರ್ತರಾದ ಮಧು ಕಾರ್ನಾಟ್ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳ ಹಾಗೂ ಪೋಷಕರ ಬಗ್ಗೆ ಮಾಹಿತಿ ಪಡೆದು ಉತ್ತಮ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಾರೆ ಎಂದು ತಿಳಿಸಿದರು. ಜಿ.ಎಸ್.ಎಸ್ ಯೋಗ ಸಂಸ್ಥೆಯ ಶ್ರೀ ಹರಿ ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸಲು ಪರಿಣಾಮಕಾರಿ ಸಲಹೆಗಳನ್ನು ನೀಡಿದರು.
ಕಳೆದ ವರ್ಷಗಳಲ್ಲಿ ಮೈಸೂರು 10ನೇ ತರಗತಿಯ ಫಲಿತಾಂಶದಲ್ಲಿ ರಾಜ್ಯದ ಇತರೆ ಜಿಲ್ಲೆಗಳ ಪೈಕಿ ಹಿಂದಿದ್ದು, ರಾಜ್ಯದ ಮೊದಲ 5 ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಬರಬೇಕಂಬ ಗುರಿಯೊಂದಿಗೆ ಪ್ರಾರಂಭವಾಗಿರುವ “ವಿಶ್ವಾಸ ಕಿರಣ” ಕಾರ್ಯಕ್ರಮದಲ್ಲಿ ಮಕ್ಕಳು ನೂರಕ್ಕೆ ನೂರು ಫಲಿತಾಂಶ ನೀಡುವುದಾಗಿ ಪ್ರತಿಜ್ಞೆ ಮಾಡಿದರು.
ಜಿ ಎಸ್ ಎಸ್ ಸಂಸ್ಥೆಯ ಶ್ರೀ ಹರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರುಗಳು ಉಪಸ್ಥಿತರಿದ್ದರು. (ಎಸ್.ಎಚ್)