ಮೈಸೂರು

ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕರನ್ನು ಸತಾಯಿಸುತ್ತಿರುವುದಕ್ಕೆ ಖಂಡನೆ : ಶಿಕ್ಷಕರಿಂದ ಪ್ರತಿಭಟನೆ

ಮೈಸೂರು,ಅ.16-ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕರನ್ನು ಸತಾಯಿಸುತ್ತಿರುವುದನ್ನು ಹಾಗೂ ದಿನಕ್ಕೊಂದು ರೀತಿ ವರ್ಗಾವಣೆ ನೀತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಶಿಕ್ಷಕರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ 9 ಗಂಟೆಗೆ ವರ್ಗಾವಣೆಯಾಗಬೇಕಿರುವ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಂದಿತ್ತು. ಅದರಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಬೆಳಿಗ್ಗೆ 9 ಗಂಟೆಯಿಂದ ಕಾಯುತ್ತಿದ್ದೇವೆ ಆದರೆ ಇದುವರೆಗೂ ಕೌನ್ಸಿಲಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಿಲ್ಲ. ಆನ್ ಲೈನ್ ಮೂಲಕ ಶಿಕ್ಷಕರ ವರ್ಗಾವಣೆ ಮಾಡಲಾಗುವುದು ಎಂದು ಸಚಿವರಾಗಿದ್ದ ಎನ್.ಮಹೇಶ್ ಹೇಳಿದ್ದರು. ಆದರೆ ಸಾಫ್ಟ್ ವೇರ್ ಸಿದ್ಧಪಡಿಸದೇ ಶಿಕ್ಷಕರನ್ನು ಕೌನ್ಸಿಲಿಂಗ್ ಪ್ರಕ್ರಿಯೆಗೆ ಕರೆಯುತ್ತಾರೆ. ಇಂದು 20 ಜನರ ಹೆಸರನ್ನು ವರ್ಗಾವಣೆ ಪ್ರಕ್ರಿಯೆ ಪಟ್ಟಿಯಲ್ಲಿ ಸೇರಿಸಿದ್ದರೆ ನಾಳೆ 30 ಜನರ ಹೆಸರನ್ನು ತೋರಿಸುತ್ತಾರೆ. ಹೀಗೆ ಕಳೆದ 4-5 ತಿಂಗಳಿಂದ ಶಿಕ್ಷಕರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇವತ್ತು ವರ್ಗಾವಣೆಯಾಗಬಹುದು ಎಂದು ಶಿಕ್ಷಕರು ಬಹಳ ದೂರದಿಂದ ಬಂದಿರುತ್ತಾರೆ. ಇಲ್ಲಿ ಬಂದರೆ ಸಾಫ್ಟ್ ವೇರ್ ತಯಾರಾಗಿಲ್ಲ, ಆದೇಶ ಬಂದಿಲ್ಲ ಎನ್ನುತ್ತಾರೆ. ಸಾಫ್ಟ್ ವೇರ್ ತಯಾರಾಗಿಲ್ಲ ಎಂದ ಮೇಲೆ ಶಿಕ್ಷಕರನ್ನು ಕೌನ್ಸಿಲಿಂಗ್ ಗೆ ಕರೆದು ಅವರಿಗೆ ತೊಂದರೆ ಕೊಡುವುದು, ಕಾಯಿಸುವುದು ಬೇಡ. ಸಾಫ್ಟ್ ವೇರ್ ತಯಾರಾದ ಮೇಲೆ ನಮ್ಮನ್ನು ಕರೆದು ಒಟ್ಟಿಗೆ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸಲಿ ಎಂದರು ಶಿಕ್ಷಕರು.

ಮೊದಲೆಲ್ಲ ನಿವೃತ್ತಿಗೆ 2 ವರ್ಷಗಳಿರುವಾಗಲೇ ಅವರನ್ನು ವರ್ಗಾವಣೆ ಪ್ರಕ್ರಿಯೆಯಿಂದ ಕೈ ಬಿಡಲಾಗುತ್ತಿತ್ತು. ಆದರೆ ಈಗ ನಿವೃತ್ತಿಗೆ ಮೂರರಿಂದ ಆರು ತಿಂಗಳು ಇರುವವರನ್ನು ವರ್ಗಾವಣೆ ಪಟ್ಟಿಗೆ ಸೇರಿಸುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಹೆಚ್ಚು ಶಿಕ್ಷಕರಿರುತ್ತಾರೆ. ಆದರೆ ಪ್ರಾಥಮಿಕ ಶಾಲೆಯಲ್ಲಿ 3,4 ಮಂದಿ ಶಿಕ್ಷಕರಿರುತ್ತಾರೆ. ಡಿ ಗ್ರೂಪ್ ನೌಕರರಿರುವುದಿಲ್ಲ. ಎಲ್ಲ ಕೆಲಸವನ್ನು ಮುಖ್ಯ ಶಿಕ್ಷಕರೇ ಮಾಡಬೇಕು. ವಿಷಯವಾರು ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿಲ್ಲ. ಅದನ್ನು ಕಾಯ್ದಿರಿಸಿದ್ದೇವೆ ಎಂದು ಹೇಳುತ್ತಾರೆ. ಈ ರೀತಿ ಕಾಯ್ದಿರಿಸಿದರೆ ಶಾಲೆ ಹಾಗೂ ಮಕ್ಕಳ ಗತಿಯೇನು? ಕಡಿಮೆ ಶಿಕ್ಷಕರಿರುವ ಸರ್ಕಾರಿ ಶಾಲೆಗೆ ಪೋಷಕರು ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆಯೇ? ಎಂದು ಶಿಕ್ಷಕರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ಸೋಮೇಗೌಡ, ಕಾರ್ಯದರ್ಶಿ ಸತೀಶ್, ಸಹಾಯಕ ಕಾರ್ಯದರ್ಶಿ ಎಸ್.ರಘು, ಖಜಾಂಚಿ ಮಹಾದೇವಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶಿವರಾಜೇಗೌಡ, ಉಪಾಧ್ಯಕ್ಷರಾದ ಸುಮತಿ, ಮಲ್ಲಿಕಾರ್ಜುನ, ಮಮತ, ಸಂಘಟನಾ ಕಾರ್ಯದರ್ಶಿ ಪದ್ಮ ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: