ಮೈಸೂರು

ಕದಂಬ –ರಂಗಾವಳಿ ನಾಟಕೋತ್ಸವ ‘ಜ.2 ರಿಂದ 4ವರೆಗೆ’

ಮೈಸೂರಿನ ಕದಂಬ ರಂಗ ವೇದಿಕೆಯಿಂದ ಮೂರು ದಿನಗಳ ಕಾಲ ‘ಕದಂಬ – ರಂಗಾವಳಿ ನಾಟಕೋತ್ಸವ’ವನ್ನು ಆಯೋಜಿಸಲಾಗಿದ್ದು ಸಾಮಾಜಿಕ ಸಂದೇಶ ಸಾರುವ ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದು ಅಧ್ಯಕ್ಷ ರಾಜಶೇಖರ ಕದಂಬ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜ.1 ರಿಂದ 4ರವರೆಗೆ ಕಲಾಮಂದಿರದಲ್ಲಿ ಕದಂಬ -ರಂಗಾವಳಿ ನಾಟಕೋತ್ಸವ ನಡೆಯಲಿದ್ದು ಜ.1ರ ಬೆಳಿಗ್ಗೆ 11ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಖ್ಯಾತ ರಂಗತಜ್ಞ ಹಾಗೂ ಮಾಜಿ ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಸುರೇಶ್ ಅನಗಳ್ಳಿ ಚಾಲನೆ ನೀಡುವರು. ಹಿರಿಯ ರಂಗಕರ್ಮಿ ಡಾ.ನ.ರತ್ನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಹನೂರು ಹಾಗೂ ವೇದಿಕೆಯ ರಾಜಶೇಖರ ಕದಂಬ ಉಪಸ್ಥಿತರಿರುವರು ಎಂದು ತಿಳಿಸಿದರು.

ಪ್ರತಿ ದಿನ ಸಂಜೆ 7ಗಂಟೆಗೆ ನಾಟಕ ಪ್ರದರ್ಶನ ಆರಂಭವಾಗಲಿದೆ. ಜ.2ರ ಸೋಮವಾರ ಕೊಡಗು ರಂಗಭೂಮಿ ಕಲಾವಿದರು ‘ಮಿಥುನ’ ನಾಟಕ ಪ್ರದರ್ಶನ ಮಾಡಲಿದ್ದು. ರಂಗವಿನ್ಯಾಸ ಮತ್ತು ನಿರ್ದೇಶನವನ್ನು ಮಾಲತೇಶ ಬಡಿಗೇರ ಮಾಡಿದ್ದಾರೆ.

ಜ.3ರಂದು ‘ಬೇರಿಲ್ಲದವರು’ ನಾಟಕವನ್ನು ಕದಂಬ ರಂಗವೇದಿಕೆಯಿಂದ ಪ್ರದರ್ಶಿಸಲಿದ್ದು, ನಿರ್ದೇಶನವನ್ನು ಪ್ರಭುಸ್ವಾಮಿ ಮಳಿಮಠ ಮಾಡಿದ್ದಾರೆ,  ಜ.4ರಂದು ವನರಂಗದಲ್ಲಿ ಸಾಗರದ ಅಂತರಂಗ ಟ್ರಸ್ಟ್ ನಿಂದ ‘ಸೀತಾ ಚರಿತ’ ನಾಟಕ ಪ್ರದರ್ಶನಗೊಳ್ಳಲಿದ್ದು ಎಸ್.ಮಾಲತಿ ಸಾಗರ ರಚಿಸಿ ನಿರ್ದೇಶಿಸಿದ್ದಾರೆ. ಕೆ.ಎನ್.ಭಾರ್ಗವ ಹೆಗ್ಗೋಡು ಸಂಗೀತ ನೀಡಿದ್ದಾರೆ. ಹಾಗೂ ಪುರುಷೋತ್ತಮ ತಲವಾಟ ರಂಗ ವಿನ್ಯಾಸ ಮಾಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಶ್ರೀಕಂಠ ಗುಂಡಪ್ಪ, ಯು.ಎಸ್.ರಾಮಣ್ಣ, ಕೋಶಾಧ್ಯಕ್ಷ ಡಿ.ತಿಪ್ಪಣ್ಣ ಹಾಗೂ ರಮೇಶ್ ಬಾಬು ಗುಬ್ಬಿ ಉಪಸ್ಥಿತರಿದ್ದರು.

Leave a Reply

comments

Related Articles

error: