
ಮೈಸೂರು
ಜಂಬೂ ಸವಾರಿ ವೀಕ್ಷಣಾ ಸ್ಥಳದಲ್ಲಿ ಬ್ಯಾರಿಕೇಡ್ ನಿರ್ಮಾಣ ಕಾರ್ಯ ಆರಂಭ
ಮೈಸೂರು,ಅ.17:- ವಿಶ್ವ ವಿಖ್ಯಾತ ದಸರಾ ಮಹೋತ್ಸವ ಜಂಬೂಸವಾರಿಗೆ ಇನ್ನು ಒಂದೇ ದಿನ ಬಾಕಿ ಇದ್ದು, ಭರದ ಸಿದ್ಧತೆಗಳು ನಡೆದಿವೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸುವ ಕಾರ್ಯ ಆರಂಭವಾಗಿದೆ.
ದಸರಾದಲ್ಲಿ ಎಲ್ಲರ ಗಮನ ಸೆಳೆಯುವ ಜಂಬೂಸವಾರಿಗೆ ಕೌಂಟ್ ಡೌನ್ ಶುರುವಾಗಿದ್ದು, ಜಂಬೂಸವಾರಿ ಸಾಗುವ ರಸ್ತೆಯ ಇಕ್ಕೆಲಗಳಲ್ಲಿಯೂ ಬ್ಯಾರಿಕೇಡ್ ಹಾಕುವ ಕಾರ್ಯ ಆರಂಭವಾಗಿದೆ. ಅರಮನೆ ವೃತ್ತ, ಕೆ.ಆರ್.ವೃತ್ತ, ಆಯುರ್ವೇದ ವೃತ್ತ ಸೇರಿದಂತೆ ಜನನಿಬಿಡ ಪ್ರದೇಶಗಲ್ಲಿ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಜಂಬೂಸವಾರಿ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ತೊಂದರೆ ಆಗದಂತೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದ್ದು, ರಾಜ್ಯ,ದೇಶ ವಿದೇಶಗಳಿಂದಲು ಜಂಬೂಸವಾರಿ ವೀಕ್ಷಿಸಲು ಪ್ರವಾಸಿಗರು ಈಗಾಗಲೇ ಮೈಸೂರು ತಲುಪುತ್ತಿದ್ದಾರೆ. ಬಿಸಿಲಿಗೆ ನೆರಳೊದಗಿಸಲು ಪೆಂಡಾಲ್ ಕೂಡ ಅಳವಡಿಸಲಾಗುತ್ತಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ತೊಂದರೆ ಆಗದಂತೆ ಪೊಲೀಸ್ ಇಲಾಖೆ ಕೂಡ ಎಚ್ಚರಿಕೆ ವಹಿಸಿದೆ. ಈಗಾಗಲೇ ನಗರದಲ್ಲಿ ಮೊದಲ ಪೊಲೀಸ್ ಪಡೆ ಬೀಡುಬಿಟ್ಟಿದ್ದು, ಇಂದು ನಗರಕ್ಕೆ ಎರಡನೇ ಪೊಲೀಸ್ ಪಡೆ ಕಾಲಿಡಲಿದೆ. ಸುಮಾರು 5 ಸಾವಿರ ಪೊಲೀಸರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. (ಕೆ.ಎಸ್,ಎಸ್.ಎಚ್)