ಪ್ರಮುಖ ಸುದ್ದಿಮೈಸೂರು

ಅಲ್ಪ ಮಾನವರಾಗದೇ ವಿಶ್ವ ಮಾನವರಾಗಬೇಕಿದೆ : ಎಂ.ಕೃಷ್ಣಪ್ಪ ಸಲಹೆ

birthday-kuvempu-webನಾವು ಅಲ್ಪಮಾನವರಾಗದೇ ವಿಶ್ವಮಾನವರಾಗಬೇಕು ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಸಲಹೆ ನೀಡಿದರು.

ಮೈಸೂರು ಮೆಡಿಕಲ್ ಕಾಲೇಜು ಅಮೃತ ಮಹೋತ್ಸವ ಭವನದಲ್ಲಿ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ಆಯೋಜಿಸಲಾದ ರಾಷ್ಟ್ರ ಕವಿ ಕುವೆಂಪುರವರ 112ನೇ ಜನ್ಮ ದಿನಾಚರಣೆ ಹಾಗೂ ಕುವೆಂಪು ಅವರ ಪಾಂಚಜನ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಂ. ಕೃಷ್ಣಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಾವೆಲ್ಲ ಕುವೆಂಪು ಅವರ ಮನುಜ ಪಥ ಪಾಲಿಸಬೇಕಾಗಿದೆ. ಇಂದು ಎಲ್ಲರೂ ಜಾತಿ, ಧರ್ಮ, ಊರಿಗೆ ಬಂಧನವಾಗಿದ್ದಾರೆ. ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ ಉತ್ತುಂಗಕ್ಕೆ ಕಾರಣರಾದವರು. ವಿಶ್ವಮಾನವ ಸಂದೇಶ ಪಾಲನೆ ಅನುಸರಿಸಬೇಕು. ಅದನ್ನು ಬಿಟ್ಟು ನಾವು ಜಗಳವಾಡುತ್ತಿದ್ದೇವೆ. ಇದರಿಂದ ನಾವು ಅಲ್ಪ ಮಾನವರಾಗಿದ್ದೇವೆ. ನಾವು ವಿಶ್ವಮಾನವರಾಗಬೇಕು ಎಂದು ಸಲಹೆ ನೀಡಿದರು.

ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯಕ್ಕೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಆಡಂಬರ ಹಾಗೂ ಅದ್ಧೂರಿ ಮದುವೆಗೆ ಕಡಿವಾಣ ಹಾಕಿ, ಕುವೆಂಪು ಅವರ ಆಶಯ ಪಾಲಿಸಬೇಕು ಎಂದು ತಿಳಿಸಿದರು.

ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಹಿರಿಯ ಸಾಹಿತಿಗಳಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸುವಂತೆ ಇದೇ ವೇಳೆ ಮನವಿ ಮಾಡಿದರು. ಮಾತ್ರವಲ್ಲ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವಂತೆಯೂ ಸಚಿವರನ್ನು ಒತ್ತಾಯಿಸಿದರು.

ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಅವರಿಗೆ ಪಾಂಚಜನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಪ್ರಧಾನ ಗುರುದತ್ತ, ಶಾಸಕ ವಾಸು, ಮೆಡಿಕಲ್ ಕಾಲೇಜು ಡೀನ್ ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು ಕುವೆಂಪು ಅವರ 112ನೇ ಜನ್ಮ ದಿನದ ಪ್ರಯುಕ್ತ 112 ವಿದ್ಯಾರ್ಥಿಗಳಿಂದ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.

Leave a Reply

comments

Related Articles

error: