ಕರ್ನಾಟಕ

ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು (ಅ.17): ಕಳೆದ ಎರಡು ದಿನಗಳಿಂದ ವೈರಾಣು ಜ್ವರದಿಂದ ಬಳಲುತ್ತಿದ್ದ ಹಿರಿಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಕಾರಣ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜ್ವರ, ಮೈಕೈ ನೋವಿನಿಂದ ಶಿವಣ್ಣ ಸೋಮವಾರ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ಅಲ್ಲಿನ ವೈದ್ಯರು ಶಿವರಾಜ್‍ಕುಮಾರ್ ಅವರಿಗೆ ಚಿಕಿತ್ಸೆ ನೀಡಿ 48 ಗಂಟೆವರೆಗೂ ಜ್ವರ ಮರುಕಳಿಸದಿದ್ದರೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರು. ಜ್ವರ ಕಡಿಮೆಯಾದ ಕಾರಣ ಇಂದು ಮಧ್ಯಾಹ್ನ ಶಿವರಾಜ್‍ಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇನ್ನೂ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಇದೇ ವೇಳೆ ವೈದರು ಸೂಚಿಸಿದ್ದಾರೆ.

ನಾಳೆ ಬಹುನಿರೀಕ್ಷಿತ ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ನಟನೆಯ ದಿ ವಿಲನ್ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರದಲ್ಲೇ ಅಭಿಮಾನಿಗಳ ಜತೆಗೂಡಿ ಚಿತ್ರ ವೀಕ್ಷಿಸುವುದಾಗಿ ಶಿವಣ್ಣ ಹೇಳಿಕೊಂಡಿದ್ದರು. ಆದರೆ, ವಿಶ್ರಾಂತಿಯ ಅಗತ್ಯವಿರುವುದರಿಂದ ಅಭಿಮಾನಿಗಳೊಂದಿಗೆ ಶಿವಣ್ಣ ಚಿತ್ರ ವೀಕ್ಷಣೆಗೆ ಬರುವುದು ಅನುಮಾನ ಎನ್ನಲಾಗಿದೆ.

ದಿ ವಿಲನ್ ಚಿತ್ರ ಇದೇ ಅಕ್ಟೋಬರ್ 18ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಶೋ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು ಇದನ್ನೇ ತನ್ನ ಲಾಭಕೋಸ್ಕರ ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದ್ದು ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಶುರುವಾಗಲಿದೆ.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಮೈಸೂರು, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ ನಾನು ಕಡೆಗಳಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಪ್ರದರ್ಶನ ಶುರುವಾಗಲಿದ್ದು ಇದು ಕನ್ನಡದ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ದಿ ವಿಲನ್ ಚಿತ್ರದ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಮುಂಭಾಗದಲ್ಲಿ ಅದಾಗಲೇ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ಚಿತ್ರದಲ್ಲಿ ಆಯಮಿ ಜಾಕ್ಸನ್ ನಾಯಕಿಯಾಗಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: