
ಪ್ರಮುಖ ಸುದ್ದಿ
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬಿ.ಎಸ್.ಯಡಿಯೂರಪ್ಪ ಬೆಂಬಲ
ರಾಜ್ಯ(ಬೆಂಗಳೂರು)ಅ.17:- ಕರ್ನಾಟಕ ರಾಜ್ಯ ಅನುದಾನಿತ ವಿದ್ಯಾಸಂಸ್ಥೆಗಳ ಪಿಂಚಣಿ ವಂಚಿತ ನೌಕರರ ಸಂಘವು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಂದು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಿದ ಅವರು ಉಪಚುನಾವಣೆಯ ನಂತರ ಈ ಬಗ್ಗೆ ಗಮನ ಹರಿಸಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು. ಇತ್ತೀಚೆಗೆ ನಿವೃತ್ತರಾದ 1500ಕ್ಕೂ ಹೆಚ್ಚು ನೌಕರರಿಗೆ ಕೊನೇ ತಿಂಗಳ ಸಂಬಳ ಬಿಟ್ಟರೆ ಹೆಚ್ಚಿನ ಯಾವುದೇ ಪರಿಹಾರವೂ ದೊರಕಿಲ್ಲ. ಇದು ನೌಕರರಿಗೆ ಸಿಗಬೇಕಾದ ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಈ ದೃಷ್ಟಿಯಿಂದ ಫ್ರೀಡಂ ಪಾರ್ಕ್ ನಲ್ಲಿ ನಡೆದಿರುವ ನೌಕರರ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿದ್ದು, ಅವರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ, ನಿವೃತ್ತ ನೌಕರರಿಗೆ ಸಿಗಬೇಕಾದ ಸೌಲಭ್ಯವನ್ನು ವಿಸ್ತರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.(ಎಸ್.ಎಚ್)