ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲೂ ಆನ್‍ಲೈನ್ ಮೂಲಕ ಮನೆಗೇ ಮದ್ಯ ಪೂರೈಕೆ: ಕಾನೂನು ತಿದ್ದುಪಡಿ ಸಾಧ್ಯತೆ

ಬೆಂಗಳೂರು (ಅ.20): ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಮನೆಮನೆಗೆ ಮದ್ಯ ಪೂರೈಕೆ ಮಾಡಲು ನಿರ್ಧಾರ ತೆಗೆದುಕೊಂಡಿದೆ. ಇದೇ ರೀತಿ ವ್ಯವಸ್ಥೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ಸರ್ಕಾರದ ಈ ಕ್ರಮದಿಂದ ಮದ್ಯಪ್ರಿಯರು ಆನ್‍ಲೈನ್ ಮೂಲಕವೇ ಖರೀದಿ ಮಾಡಲು ಅನುಕೂಲವಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಹಾಲಿ ಇರುವ ಅಬಕಾರಿ ಕಾಯ್ದೆಗೆ ತಿದ್ದುಪಡಿ ಮಾಡಿ ಆನ್‍ಲೈನ್ ಮೂಲಕ ಮದ್ಯಪ್ರಿಯರು ತಮಗಿಷ್ಟವಾದ ಮದ್ಯವನ್ನು ಖರೀದಿ ಮಾಡಬಹುದಾಗಿದೆ.

ಆನ್‍ಲೈನ್‍ನಲ್ಲಿ ಖರೀದಿಸಲು ಅವಕಾಶ ಕಲ್ಪಿಸುವ ಕ್ರಮದ ಹಿಂದೆ ಅಬಕಾರಿ ಇಲಾಖೆಗೆ ಲಾಭ ಗಳಿಸಿಕೊಡುವ ಉದ್ದೇಶವಿದೆ ಎನ್ನಲಾಗಿದ್ದು, ಸದ್ಯಕ್ಕೆ ರಾಜ್ಯಸರ್ಕಾರವು ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿ ರೈತರು ಪಡೆದಿದ್ದ ಸಾಲವನ್ನು ಮನ್ನಾ ಮಾಡುವ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಳದ ದೃಷ್ಟಿಯಿಂದ ಸರ್ಕಾರ ಈ ವಿಷಯದಲ್ಲಿ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗಿದೆ.

ಅಬಕಾರಿ ಇಲಾಖೆಯಿಂದ ಸರ್ಕಾರ 10 ಸಾವಿರ ಕೋಟಿ ಆದಾಯವನ್ನು ನಿರೀಕ್ಷೆ ಮಾಡಿದೆ. ಸಾಮಾನ್ಯವಾಗಿ ಸರ್ಕಾರ ನಿಗದಿಪಡಿಸಿದ ಆದಾಯಕ್ಕಿಂತಲೂ ದುಪ್ಪಟ್ಟು ರೀತಿಯಲ್ಲಿ ವರಮಾನ ಅಬಕಾರಿ ಇಲಾಖೆಯಿಂದ ಹೆಚ್ಚಳವಾಗುತ್ತದೆ. ಆನ್‍ಲೈನ್ ಮೂಲಕ ನೇರವಾಗಿ ಮದ್ಯಪ್ರಿಯರ ಮನೆಗೇ ಮದ್ಯ ಒದಗಿಸುವ ವ್ಯವಸ್ಥೆ ಕಲ್ಪಿಸಿದರೆ ಇನ್ನಷ್ಟು ವರಮಾನ ನಿರೀಕ್ಷಿಸಬಹುದು ಎಂಬ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರ ಆನ್‍ಲೈನ್ ಮದ್ಯ ಮಾರಾಟಕ್ಕೆ ಮುಂದಾಗಿದೆ.

ಈ ಬಗ್ಗೆ ಈಗಾಗಲೇ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರತಿನಿಧಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಮಾಡುವುದರಿಂದ ಆಗಬಹುದಾದ ಲಾಭ-ನಷ್ಟ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇದರಿಂದ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮದ್ಯ ಮಾರಾಟಗಾರರ ಸಂಘ ಸ್ಪಷ್ಟಪಡಿಸಿದೆ.

ಇದೀಗ ಅಬಕಾರಿ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರ ಜೊತೆ ಮಾತುಕತೆ ನಡೆಸಿ ಅನುಮತಿ ದೊರೆತ ನಂತರ ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿಯಾಗಲಿದೆ ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: