ಪ್ರಮುಖ ಸುದ್ದಿ

ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸಲು ನಿರಾಕರಿಸಿದ ದಿಲ್ಲಿ ಸರಕಾರ ವಿರುದ್ಧ ಪ್ರತಿಭಟನೆಗಿಳಿದ ಪೆಟ್ರೋಲ್‌ ಬಂಕ್‌

ದೇಶ(ನವದೆಹಲಿ)ಅ.22:- ಇಂಧನ ಬೆಲೆಗಳ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಕಡಿತಗೊಳಿಸಲು ನಿರಾಕರಿಸಿದ ದಿಲ್ಲಿ ಸರಕಾರ  ವಿರುದ್ಧ ದಿಲ್ಲಿಯ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಸಂಸ್ಥೆ ಹಾಗೂ ಪೆಟ್ರೋಲ್‌ ಬಂಕ್‌ ಗಳು ಸೋಮವಾರ ಪ್ರತಿಭಟನೆಗಿಳಿದಿವೆ.

ಈ ಪ್ರತಿಭಟನೆಯ ನೇತೃತ್ವವನ್ನು ದಿಲ್ಲಿ ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಶನ್ (ಡಿಪಿಡಿಎ) ವಹಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ರಿಂದ ಸಂಜೆರವರೆಗೆ ದಿಲ್ಲಿಯಲ್ಲಿ ಪೆಟ್ರೋಲ್​ ಸರಬರಾಜು ಸ್ಥಗಿತಗೊಳ್ಳಲಿದೆ. ಸಿಎನ್​ಜಿ ಜತೆ 400ಕ್ಕೂ ಅಧಿಕ ಪೆಟ್ರೋಲ್​ ಬಂಕ್​ಗಳು ಬಂದ್ ಆಗಲಿವೆ. ಕೇಂದ್ರ ಸರಕಾರ ಸೆ. 4ರಂದು ಪೆಟ್ರೋಲ್ ಮತ್ತು ಡೀಸೆಲ್​ ದರವನ್ನು 2.50 ರೂ. ಕಡಿಮೆಗೊಳಿಸಿತ್ತು. ನಂತರ ಕೇಂದ್ರದ ಸೂಚನೆಯಂತೆ ಹರಿಯಾಣ ಹಾಗೂ ಉತ್ತರಪ್ರದೇಶ ರಾಜ್ಯ ಸರಕಾರಗಳು ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿತ್ತು. ಆದರೆ ದಿಲ್ಲಿ ಸರಕಾರ ವ್ಯಾಟ್ ​ಕಡಿತಗೊಳಿಸಲು ನಿರಾಕರಿಸಿದೆ. ಇದರಿಂದ ತೈಲ ದರ ವ್ಯತ್ಯಯದಿಂದಾಗಿ ಶೇ.50ರಿಂದ 60ರಷ್ಟು ಮಾರಾಟ ಕುಸಿದಿದೆ. ಇದರಿಂದ ದಿಲ್ಲಿಯ ತೈಲ ವಿತರಕರಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯ ಎಎಪಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಡಿಪಿಡಿಎ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಅರವಿಂದ್​ ಕೇಜ್ರಿವಾಲ್, ಪೆಟ್ರೋಲ್‌ ಪಂಪ್‌ಗಳನ್ನು ಬಂದ್‌ ಮಾಡುತ್ತಿರುವ ಮಾಲೀಕರಲ್ಲಿ ಬಹುತೇಕರು ಬಿಜೆಪಿಯವರು. ಇದು ಬಿಜೆಪಿಯವರ ಕುತಂತ್ರ ಎಂದು ನಮಗೆ ಕೆಲ ಪೆಟ್ರೋಲ್​ ಬಂಕ್ ಮಾಲಕರೇ ಮಾಹಿತಿ ನೀಡಿದ್ದಾರೆ ಎಂದು ​ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: