ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ಅಭ್ಯರ್ಥಿ ವಿರುದ್ಧ ಆಕ್ರೋಶ: ಬಿಜೆಪಿ ಬೆಂಬಲಿಸಲು ರಮ್ಯಾ ಅಭಿಮಾನಿಗಳ ನಿರ್ಧಾರ!

ಮಂಡ್ಯ (ಅ.22): ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಹದಗೆಡುವ ಲಕ್ಷಣವೆನ್ನುವಂತೆ ಕಂಡುಬರುತ್ತಿದೆ. ಯಾಕಂದ್ರೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಮ್ಯಾ ಅಭಿಮಾನಿಗಳು ತಾವು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ.

ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರು ಕಣದಲ್ಲಿದ್ದಾರೆ. ಆದರೆ, ಮಂಡ್ಯ ಕ್ಷೇತ್ರದ ಮಾಜಿ ಸಂಸದೆ. ರಮ್ಯಾ ಅವರ ಅಭಿಮಾನಿಗಳು ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರನ್ನು ಬೆಂಬಲಿಸುವುದಿಲ್ಲ. ಅವರನ್ನು ಸೋಲಿಸಲು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಎಲ್.ಆರ್. ಶಿವರಾಮೇಗೌಡ ಅವರ ವಿರುದ್ಧ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಇರುವ ಕಾರಣ ಅವರನ್ನು ಸಮಾಧಾನಪಡಿಸಲು ಅ.23ರಂದು ಕನಕ ಭವನದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ.

ಶಿವರಾಮೇಗೌಡ ವಿರುದ್ಧ ಆಕ್ರೋಶ :

ಶಿವರಾಮೇಗೌಡರು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ರಮ್ಯಾ ಮೇಡಂಗೆ ಅನ್ಯಾಯ ಮಾಡಿದ್ದಾರೆ. ಅವರು ಮಂಡ್ಯಕ್ಕೆ ಬಾರದಂತೆ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ನಮಗೆ ಈಗ ಇರುವ ಆಯ್ಕೆ ಬಿಜೆಪಿ ಮಾತ್ರ ಎಂದು ರಮ್ಯಾ ಅಭಿಮಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಗುಣಶೇಖರ್ ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಎಲ್.ಆರ್.ಶಿವರಾಮೇಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಜೆಡಿಎಸ್ ಸೇರಿದ ನಂತರ ರಮ್ಯಾ ಸೋಲಿಗೆ ತಾನೇ ಕಾರಣ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಅಲ್ಲದೇ ರಮ್ಯಾ ಅವರನ್ನು ಫ್ಲಾಯಿಂಗ್ ಸ್ಟಾರ್ ಎಂದು ಕರೆದಿದ್ದರು. ಆದ್ದರಿಂದ, ಉಪ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ. ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದಾರೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ರಮ್ಯಾ ಅಭಿಮಾನಗಳ ಘೋಷಣೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿತುಪ್ಪವಾಗಿದೆ.

ಸಭೆ ಕರೆದ ಕೆಪಿಸಿಸಿ ಅಧ್ಯಕ್ಷರು :

ಮಂಡ್ಯ ಉಪ ಚುನಾವಣೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈಗಾಗಲೇ ಜಿಲ್ಲೆಯ ನಾಯಕರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಈಗ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೆ ಕೊಟ್ಟಿರುವ ಹಿನ್ನೆಲೆಯಲ್ಲಿ ಅ.23ರಂದು ಕನಕ ಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮೈತ್ರಿಯಿಂದಾಗಿ ಕೋಪಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸುವಲ್ಲಿ ದಿನೇಶ್ ಗುಂಡೂರಾವ್ ಅವರು ಸಫಲರಾಗುವರೇ ಎಂಬುದನ್ನು ಕಾಲವೇ ಹೇಳಬೇಕಿದೆ. (ಎನ್.ಬಿ)

Leave a Reply

comments

Related Articles

error: