ಕರ್ನಾಟಕಪ್ರಮುಖ ಸುದ್ದಿಮೈಸೂರು

ಯುವಕರನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಲಿದೆ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಭಾರತ ಪುರಾತನ ನಾಗರಿಕತೆಗೆ ಹೆಸರುವಾಸಿಯಾಗಿದ್ದು, 2020ರ ವೇಳೆಗೆ ವಿಶ್ವದ ಹೆಚ್ಚು ಯುವಕರನ್ನು ಒಳಗೊಂಡ ರಾಷ್ಟ್ರವಾಗಿ ಬದಲಾಗಲಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟರು.

ಬುಧವಾರ ಮೈಸೂರಿನ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಲಾದ 17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಾಂಬೂರಿ ಸ್ಕೌಟ್ಸ್ ಗೈಡ್ಸ್, ರೇಂಜರ್ಸ್ ಅಂಡ್ ರೋವರ್ಸ್ ಹಾಗೂ ಸ್ವಯಂಸೇವಕರಲ್ಲಿ ನಾಯಕತ್ವಗುಣ, ಸಹಾಯ ಮನೋಭಾವ, ನೈತಿಕ ಮಾನದಂಡಗಳು ಹಾಗೂ ಮೌಲ್ಯಗಳನ್ನು ಬೆಳೆಸಲಿದೆ. ಇದರಲ್ಲಿ ಭಾಗವಹಿಸುವವರಿಗೆ ಪರಸ್ಪರ ಆಲೋಚನೆಗಳ ವಿನಿಮಯ, ಕೌಶಲ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಸಹಾಯಕವಾಗಲಿದ್ದು ಯುವಕರಲ್ಲಿ ಆಂತರಿಕ ಮೌಲ್ಯ, ಸೇವೆ, ಶಿಸ್ತು, ದೇಶಭಕ್ತಿಯ ಬಗ್ಗೆ ಅರಿವು ಮೂಡಿಸಲು ಸಹಾಯಕವಾಗಲಿದೆ ಎಂದು ಹೇಳಿದರು.

ದೇಶದ ಜನಂಖ್ಯೆಯಲ್ಲಿ ಶೇ.50ರಷ್ಟು ಮಂದಿ 25ವರ್ಷದೊಳಗಿನ ಯುವಕರಾಗಿದ್ದು, ದೇಶದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಇಂತಹ ಆಸ್ತಿಯನ್ನು ದೇಶದ ಅಭಿವೃದ್ಧಿಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಸನ್ನದ್ಧಗೊಳಿಸಿ ಪ್ರೋತ್ಸಾಹಿಸಿ ಮುನ್ನಡೆಸಿದಾಗ ಮಾತ್ರ ನಿಜವಾದ ಆಸ್ತಿಯಾಗಿ ಪರಿವರ್ತನೆಯಾಗಲಿದ್ದಾರೆ. ಅಂತಹ ಜವಾಬ್ದಾರಿ ನಮ್ಮ ಮೇಲಿದೆ. ಯುವಕರನ್ನು ಕೈಹಿಡಿದು ಸರಿದಾರಿಯಲ್ಲಿ ಮುನ್ನಡೆಸಿದರೆ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಬಾಯಿ ರೂಢಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರಾಸಾಯನಿಕ, ಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ವಿಜಯ್ ಗೋಯಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಅನಿಲ್ ಕುಮಾರ್ ಜೈನ್, ಮುಖ್ಯ ರಾಷ್ಟ್ರೀಯ ಆಯುಕ್ತ ಬಿ.ಐ.ನಾಗರಾಳೆ, ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

Leave a Reply

comments

Related Articles

error: