
ಪ್ರಮುಖ ಸುದ್ದಿಮೈಸೂರು
ಅತಂತ್ರರಾದ ‘ಇನೋವೇಟಿವ್ ಟೆಕ್ನಾಲಜೀಸ್’ ಕಾರ್ಮಿಕರು- ನ್ಯಾಯಕ್ಕೆ ಒತ್ತಾಯಿಸಿ 25ರಂದು ಪ್ರತಿಭಟನೆ
ಅ.31ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ : ಎಚ್ಚರಿಕೆ
ಮೈಸೂರು, ಅ.22 : ನಗರದ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಪ್ರತಿಷ್ಠಿತ ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ನ ಮಹಿಳೆಯರೂ ಸೇರಿದಂತೆ 94 ಕಾರ್ಮಿಕರನ್ನು ಕೆಲಸವೇ ನಡೆಸುತ್ತಿಲ್ಲದ ದೂರದ ತಿರುಪತಿಯ ನಿರ್ಜನ ಭಾಗದಲ್ಲಿರುವ ಕಾರ್ಖಾನೆಗೆ ವರ್ಗಾಯಿಸಿ, ಅಲ್ಲಿಯೂ ಕೆಲಸ ಇಲ್ಲ, ಇಲ್ಲಿಯೂ ಕೆಲಸ ಇಲ್ಲ ಎನ್ನುವ ಪರಿಸ್ಥಿತಿಗೆ ದೂಡಿರುವುದರ ವಿರುದ್ಧ ಅ. 25 ರಂದು ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಿಐಟಿಯು ತಿಳಿಸಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಎನ್.ಕೆ. ಬಾಲಾಜಿರಾವ್, ಕಂಪನಿಯಲ್ಲಿ ಸುಮಾರು 400 ಮಂದಿ ಯಾವುದೇ ಮೂಲ ಸೌಲಭ್ಯ ಇಲ್ಲದೆ, ಕನಿಷ್ಠ ಸಂಬಳದಲ್ಲಿ ದುಡಿಯುತ್ತಿದ್ದು, ಇವರನ್ನೆಲ್ಲ ಕೆಲಸದಿಂದ ತೆಗೆಯಬೇಕೆಂಬ ಹುನ್ನಾರದಿಂದ ಕಂಪನಿಯು 94 ಮಂದಿಯನ್ನು ದೂರದ ಆಂಧ್ರ ಪ್ರದೇಶದ ವಿಕೃತಮಾಲ ಎಂಬ ಸ್ಥಳಕ್ಕೆ ವರ್ಗಾಯಿಸಿದೆ.
ಅಲ್ಲಿ ಕಾರ್ಖಾನೆಯೂ ನಡೆಯುತ್ತಿಲ್ಲ, ಜೊತೆಗೆ ತಿರುಪತಿಯಿಂದ 20 ಕಿ.ಮೀ ದೂರದ ಅಲ್ಲಿಗೆ ಯಾವುದೇ ಸಾರಿಗೆ ಸೌಲಭ್ಯವೂ ಇಲ್ಲ. ಇನ್ನು, ಅಲ್ಲಿ ಶೌಚಾಲಯವಾಗಲೀ, ಊಟ ತಿಂಡಿ ವ್ಯವಸ್ಥೆಯಾಗಲೀ ಇಲ್ಲ. ಹೀಗಿರುವಾಗ ಅವರು ತಾವು ಕಾರ್ಮಿಕ ಸಂಘಕ್ಕೆ ಸೇರಿರುವುದನ್ನೇ ಗಮನದಲ್ಲಿರಿಸಿಕೊಂಡು ಕಂಪನಿ ಕೈಗೊಂಡಿರುವ ಸೇಡಿನ ಕ್ರಮದ ವಿರುದ್ಧ ನ್ಯಾಯ ಕೇಳಿ ಕಾರ್ಮಿಕ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಮೊದಲಾದವರಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಈಗ ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಗಿದೆ ಎಂದು ವಿವರಿಸಿದರು.
ಒಂದು ವೇಳೆ ಅ. 25 ರ ಪ್ರತಿಭಟನೆಗೆ ಯಾರೂ ಮಣಿಯದಿದ್ದಲ್ಲಿ ಅನಿವಾರ್ಯವಾಗಿ ಅ.31 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆಂದು ಎಚ್ಚರಿಸಿದರು.
ಶಶಿಕುಮಾರ್, ಸುಷ್ಮಾಗೌಡ, ಎಚ್.ಎಸ್. ಸುನಂದ, ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)