ಪ್ರಮುಖ ಸುದ್ದಿಮೈಸೂರು

ಹೊಸ ವರ್ಷಾಚರಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸಿ; ಇಲ್ಲದಿದ್ದಲ್ಲಿ ಶಿಕ್ಷೆ ಖಚಿತ : ಡಾ.ಸುಬ್ರಹ್ಮಣ್ಯೇಶ್ವರರಾವ್

2017ರ ಹೊಸ ವರ್ಷಾಚರಣೆಯ ಸಂಬಂಧ ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್, ಕ್ಲಬ್ ರೆಸಾರ್ಟ್ ಮತ್ತು ಸಂಘಸಂಸ್ಥೆಗಳಿಗೆ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಆಯುಕ್ತರು ಡಿ.31ರಂದು ರಾತ್ರಿ ಆರಂಭವಾಗುವ ಹೊಸವರ್ಷಾಚರಣೆಯನ್ನು ಮೈಸೂರು ನಗರದ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಸ್ ಗಳಲ್ಲಿ ಆಚರಿಸಲು ಮಧ್ಯರಾತ್ರಿ 12.30 ರ ವರೆಗೆ ಅನುಮತಿ ನೀಡಲಾಗಿದೆ. 12.30 ರ ಒಳಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮುಕ್ತಾಯ ಮಾಡಬೇಕು. ಆದರೆ ಸಿಎಲ್-2 ವರ್ಗದ ಮದ್ಯದ ಅಂಗಡಿಗಳಿಗೆ ಈ ಅನುಮತಿ ಇಲ್ಲ.

ಮದ್ಯ ಸರಬರಾಜನ್ನು ಮಧ್ಯರಾತ್ರಿ 12.30ಕ್ಕೆ ರೊಳಗೆ ಕಡ್ಡಾಯವಾಗಿ ಮುಕ್ತಾಯ ಮಾಡಬೇಕು. 12.30 ರ ವರೆಗೆ ಮದ್ಯಸರಬರಾಜು ಮಾಡಬೇಕಾದಲ್ಲಿ ಅಬಕಾರಿ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಹಾಗೂ ಅನುಮತಿ ಪತ್ರದ ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಬೇಕು ಎಂದಿದ್ದಾರೆ.

ಹೊಸ ವರ್ಷಾಚರಣೆಯ ಸಂಬಂಧ ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಹೋಟೆಲ್, ರೆಸ್ಟೋರೆಂಟ್, ಕ್ಲಬ್ ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು ಪೊಲೀಸ್ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕು. ಧ್ವನಿವರ್ಧಕಗಳನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ  ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮ ನಿರ್ವಹಿಸಬೇಕು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ರಸ್ತೆಯಲ್ಲಿ ಅತಿವೇಗವಾಗಿ ಮತ್ತು ನಿರ್ಲಕ್ಷ್ಯತೆಯಿಂದ ವಾಹನ ಚಾಲನೆ ಮಾಡುವುದು, ವ್ಹೀಲಿಂಗ್ ಮತ್ತು ರೇಸಿಂಗ್ ಮಾಡುವುದು ಹಾಗೂ ಕಾರುಗಳಲ್ಲಿ ಅತಿಯಾಗಿ ಮ್ಯೂಸಿಕ್ ಹಾಕಿಕೊಂಡು ಹೋಗುವುದನ್ನು ಗಂಭೀರವಾಗಿ ಪರಿಗಣಿಸಿ ಅಂಥಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಹೊಸ ವರ್ಷಾಚರಣೆಯ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದರೆ ಅಂಥಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಚಾಮುಂಡಿ ಬೆಟ್ಟಕ್ಕೆ ರಾತ್ರಿ 10 ಗಂಟೆಯ ನಂತರ ಪ್ರವೇಶ ನಿರ್ಬಂಧಿಸಲಾಗಿದೆ. ಇದು ಬೆಟ್ಟದಲ್ಲಿ ವಾಸಿಸುವವರಿಗೆ ಅನ್ವಯಿಸುವುದಿಲ್ಲ.

ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಪಾರ್ಕ್ ಗಳಲ್ಲಿ, ರಸ್ತೆಗಳಲ್ಲಿ, ಮೈದಾನಗಳಲ್ಲಿ ಮತ್ತು ವಾಹನಗಳ ಒಳಗಡೆ ಕುಳಿತು ಮದ್ಯಪಾನ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ.

ಹೋಟೆಲ್, ರೆಸ್ಟೋರೆಂಟ್ ಹಾಗೂ ಕ್ಲಬ್ ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಹೊಸವರ್ಷಾಚರಣೆ ಮುಗಿಸಿ ಸಾರ್ವಜನಿಕರು ತಮ್ಮ ಮನೆಗಳಿಗೆ ಆಟೋದಲ್ಲಿ ತೆರಳುವವ ವೇಳೆ ಆಟೋಚಾಲಕರು ಅವರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರಿಂದ ಹೆಚ್ಚು ಬಾಡಿಗೆಗೆ ಒತ್ತಾಯ ಮಾಡದೇ ಅವರನ್ನು ಸುರಕ್ಷಿತವಾಗಿ ತಲುಪಿಸಬೇಕಿದೆ.

ಡಿ.31ರ ರಾತ್ರಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಗರದ ಎಲ್ಲಾ ಸಂಚಾರ ಮತ್ತು ಕಾನೂನು ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಮತ್ತು ಪೊಲೀಸ್ ಗಸ್ತು ವಾಹನಗಳು ಎಲ್ಲಾ ಕಡೆ ಕಾರ್ಯನಿರ್ವಹಿಸಲಿದ್ದಾರೆ. ಸಾರ್ವಜನಿಕರಿಗೆ ಯಾರಿಗಾದರೂ ತೊಂದರೆಗಳಾದಲ್ಲಿ ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂ.ಸಂ.0821-2418339, 0821-2418139, 100 ಅಥವಾ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Reply

comments

Related Articles

error: