ಮೈಸೂರು

ಬೈಲಕುಪ್ಪೆ ಬಳಿ ಶಿಥಿಲವಾದ ಸೇತುವೆ; ಎಚ್ಚರಿಕೆ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ

ಬೈಲಕುಪ್ಪೆ: ರಸ್ತೆಗಳನ್ನು ಸರ್ಕಾರ ಆಗಾಗ್ಗೆ ಅಭಿವೃದ್ಧಿಪಡಿಸುತ್ತಿದ್ದರೂ ಹಲವೆಡೆ ಹಳೆಯ ಸೇತುವೆಗಳನ್ನು ಪುನರ್’ನಿರ್ಮಾಣ ಮಾಡದ ಕಾರಣದಿಂದಾಗಿ ಹಲವು ಸೇತುವೆಗಳು ಕಂಟಕವಾಗಿ ಪರಿಣಮಿಸುತ್ತಿವೆ. ಇಂತಹದ್ದೇ ಒಂದು ಹಳೇ ಸೇತುವೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಸಮೀಪದ ಕೊಲ್ಲಿ ಬಳಿ ಇದೆ.

ಈ ಸೇತುವೆಯು ತಾಲೂಕಿನ ಕೊಡಗು ಗಡಿ ಭಾಗದ ಕೊಪ್ಪ ಬಳಿಯಿದ್ದು ಈ ಮಾರ್ಗವಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಟಿಬೆಟನ್ ನಿರಾಶ್ರಿತರ ತಾಣದಲ್ಲಿರುವ ಗೊಲ್ಡನ್ ಟೆಂಪಲ್, ಹಾಗೂ ಗ್ರಾಮಗಳಾದ ದೊಡ್ಡಹರವೆ, ಚಿಕ್ಕಹೊಸೂರು, ದೊಡ್ಡಹೊಸೂರು, ಗಿರಗೂರು, ರಾಣಿಗೇಟ್, ಮಾರ್ಗವಾಗಿ ತೆರಳುವವರು, ಇದರ ಮೂಲಕವೇ ಸಾಗಿ ಹೋಗಬೇಕು.

ಈ ಕಿರಿದಾದ ಸೇತುವೆ ಮೇಲೆ ದಿನನಿತ್ಯ ಸಾವಿರಾರು ಪ್ರವಾಸಿಗರ ವಾಹನಗಳು ಸೇರಿದಂತೆ ಹಲವಾರು ವಾಹನಗಳು ಓಡಾಡುತ್ತಿದ್ದು, ಮೆಲ್ನೋಟಕ್ಕೆ ಶಿಥಲಗೊಂಡಿರುವುದು ಕಾಣುತ್ತಿದೆ. ಭಾರೀ ವಾಹನಗಳು ಓಡಾಡುವಾಗ ಸೇತುವೆ ಒಮ್ಮೆ ಅಲ್ಲಾಡಿದ ಅನುಭವವಾಗುತ್ತಿದ್ದು ಇದು ಇವತ್ತಲ್ಲ ನಾಳೆ ಕುಸಿದು ಬೀಳುವುದು ಖಚಿತವಾಗಿದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ, ಅದರಲ್ಲೂ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಶಾಲೆಗಳ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡು, ಇಲ್ಲಿನ ಟಿಬೆಟನ್ ದೇವಾಸ್ಥಾನವನ್ನು ವೀಕ್ಷಣೆ ಮಾಡಲು ಹೆಚ್ಚು ಪ್ರಮಾಣದಲ್ಲಿ ಆಗಮಿಸುತ್ತಾರೆ.

ಈ ಕಿರಿದಾದ ಸೇತುವೆಯಿಂದ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಮಾತನಾಡಿಕೊಳ್ಳುತ್ತಾರೆ ಕೆಲವರು. ರಸ್ತೆಯನ್ನು ಅಭಿವೃದ್ಧಿ ಮಾಡಿದ್ದರೂ ಸೇತುವೆ ಬಗ್ಗೆ ತಲೆಕೆಡೆಸಿಕೊಂಡಿಲ್ಲದ ಕಾರಣ ಹಿಂದೆ ಅವತ್ತಿನ ಪರಿಸ್ಥಿತಿಗೆ ತಕ್ಕಂತೆ ನಿರ್ಮಾಣ ಮಾಡಿರುವ ಈ ಸೇತುವೆ, ಇಂದಿನ ವಾಹನಗಳ ಒತ್ತಡ ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಬಹಳ ಕಿರಿದಾಗಿರುವ ಈ ಸೇತುವೆ, ಶಿಥಿಲಗೊಂಡಿರುವುದರಿಂದ ಏನೇ ಎಚ್ಚರಿಕೆ ವಹಿಸಿದರೂ ಅಪಾಯ ತಪ್ಪಿದ್ದಲ್ಲ.

ದೂರದಿಂದ ಬರುವ ಪ್ರವಾಸಿಗರು ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗುವುದರಿಂದ ಭಯದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ತುಂಬಿಕೊಂಡು ವಾಹನಗಳು ಓಡಾಡುವುದೇ ಕಷ್ಟ. ಇದರಿಂದಾಗಿ ಬೇರೊಂದು ಮಾರ್ಗವಾಗಿ ಸುಮಾರು 20 ಕಿ.ಮೀ. ಬಳಸಿಕೊಂಡು ಹೋಗಬೇಕಾಗುತ್ತದೆ.

ಈ ಸೇತುವೆಗೆ ಎರಡು ಬದಿ ತಡೆಗೋಡೆಯಾಗಿ ಕಬ್ಬಿಣದ ಸರಳನ್ನು ಹಾಕಲಾಗಿದ್ದು ಅವುಗಳು ತುಕ್ಕು ಹಿಡಿದು ಮುರಿದು ಹೋಗಿದೆ. ಇನ್ನಾದರೂ ಸಂಬಂಧಿಸಿದವರು ಈ ಸೇತುವೆಯತ್ತ ಗಮನ ಹರಿಸಿ ನೂತನ ಸೇತುವೆ ನಿರ್ಮಾಣ ಮಾಡುವತ್ತ ಕ್ರಮ ಕೈಗೊಳ್ಳಬೇಕಾಗಿದೆ.

ಹಲವು ವರ್ಷಗಳಿಂದ ಈ ಸೇತುವೆ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸಿಲ್ಲ. ಆದರೆ ಇತ್ತಿಚಿನ ದಿನಗಳಲ್ಲಿ ಗೊಲ್ಡನ್ ಟೆಂಪಲ್ ಒಂದು ಪ್ರವಾಸಿ ತಾಣವಾಗಿ ಬದಲಾದ ಕಾರಣ ದಿನನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದ ಕಾರಣ ಅನಾಹುತ ನಡೆವ ಮುನ್ನವೇ ಸೇತುವೆಗೆ ಕಾಯಕಲ್ಪವಾಗಬೇಕಿದೆ.

ವರದಿ ಬಿ.ಆರ್. ರಾಜೇಶ್

Leave a Reply

comments

Related Articles

error: