ಪ್ರಮುಖ ಸುದ್ದಿ

ಗುಂಡಿನ ದಾಳಿ ಪ್ರಕರಣ : ಬಾರ್ ಲೈಸೆನ್ಸ್ ರದ್ದುಗೊಳಿಸಲು ಆಗ್ರಹ : ಹಿಲ್ ರಸ್ತೆಯಲ್ಲಿ ಪ್ರತಿಭಟನೆ

ರಾಜ್ಯ(ಮಡಿಕೇರಿ) ಅ.22 : – ಇಬ್ಬರು ಕ್ಯಾಂಟೀನ್ ನೌಕರರ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಿಂದ ಅಸಮಾಧಾನಗೊಂಡಿರುವ ಹಿಲ್ ರಸ್ತೆ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸ್ಥಳೀಯ ಕಾವೇರಿ ಬಾರ್ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪಿಎಫ್‍ಐ ಸಂಘಟನೆ ಮತ್ತು ಸಲಫಿ ಮಸೀದಿಯ ಆಡಳಿತ ಮಂಡಳಿಯ ಪ್ರಮುಖರು ಬಾರ್ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಬಾರ್ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಗುಂಡು ಹಾರಿಸಿದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಪಿಎಫ್‍ಐ ಸಂಘಟನೆಯ ಅಧ್ಯಕ್ಷ ಹ್ಯಾರೀಸ್ ಮಾತನಾಡಿ, ಅ.18 ರಂದು ಮಡಿಕೇರಿ ನಗರದ ಎಲ್ಲಾ ಬಾರ್‍ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಕಾವೇರಿ ಬಾರ್‍ನಲ್ಲ್ಯಿಕ್ರಮವಾಗಿ ಮದ್ಯ ಮಾರಾಟ ಮಾಡಲಾಗಿದೆ. ಕ್ಯಾಂಟೀನ್ ನೌಕರರರಾದ ರಿಯಾಜ್ ಹಾಗೂ ಸಮೀಮ್ ಎಂಬಿಬ್ಬರ ಮೇಲೆ ಲೋಕೇಶ್ ಮತ್ತು ಅಕ್ರಂ ಗುಂಡು ಹಾರಿಸಿ ಕಾಲುಗಳಿಗೆ ಗಾಯಗೊಳಿಸಿದ್ದಾರೆ. ಮದ್ಯ ವ್ಯಸನಿಗಳ ಹಾವಳಿಯಿಂದಾಗಿ ಈ ರಸ್ತೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಧೈರ್ಯದಿಂದ ಓಡಾಡಲಾಗದ ಪರಿಸ್ಥಿತಿ ಉದ್ಭವಿಸಿದೆ ಎಂದು ಆರೋಪಿಸಿದರು.

ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ಬಂದೂಕುಗಳನ್ನು ದುರುಪಯೋಗ ಪಡಿಸಲಾಗುತ್ತಿದ್ದು, ಜಿಲ್ಲಾಡಳಿತ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಬಂದೂಕು ಕಾನೂನು ಮತ್ತು ಹಕ್ಕನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂತಹವರನ್ನು ಕೊಡಗಿನಿಂದಲೇ ಗಡಿಪಾರು ಮಾಡಬೇಕು ಎಂದರು.

ನಗರಸಭೆ ಮತ್ತು ಅಬಕಾರಿ ಇಲಾಖೆ ತಕ್ಷಣ ಕಾವೇರಿ ಬಾರ್‍ನ ಲೈಸೆನ್ಸ್‍ನ್ನು ರದ್ದುಗೊಳಿಸಬೇಕು, ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅಮಿನ್ ಮೊಹಿಸಿನ್ ಎಚ್ಚರಿಕೆ ನೀಡಿದರು.

ಸ್ಥಳೀಯ ನಿವಾಸಿ ಜಮುನಾ ಹಾಗೂ ರಾಧಾ ಮಾತನಾಡಿ, ಮದ್ಯ್ಯ ವ್ಯಸನಿಗಳು ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದು, ಮಹಿಳೆಯರು ನೆಮ್ಮದಿಯಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಲಫಿ ಮಸೀದಿ ಅಧ್ಯಕ್ಷ ರಿಯಾಜ್, ಮೌಲವಿ ಅನಾಸ್, ನಗರಸಭಾ ಸದಸ್ಯರುಗಳಾದ ಮನ್ಸೂರ್, ಕೆ.ಜಿ.ಪೀಟರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: