ಮೈಸೂರು

ಯಶಸ್ಸು ಗಳಿಸಲು ಎಚ್ಚರಿಕೆಯಿಂದ ಹೆಜ್ಜೆ ಇಡಿ : ಎಸ್.ಬಾಲಾಜಿ ಸಲಹೆ

ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಇರುವುದು ಮುಖ್ಯ ಎಂದು ರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲ ಎಸ್.ಬಾಲಾಜಿ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಮರಿಮಲ್ಲಪ್ಪ ವಿದ್ಯಾಸಂಸ್ಥೆಯ ಸಾಂಸ್ಕೃತಿಕ ಹಾಗೂ ಕ್ರೀಡಾವೇದಿಕೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮರಿಮಲ್ಲಪ್ಪನವರ ದೂರದೃಷ್ಟಿ ನಿಜಕ್ಕೂ ಇವತ್ತು ಸಾರ್ಥಕವಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಒಳ್ಳೆಯ ನಾಯಕರಿದ್ದಾರೆ. ಅದಕ್ಕೆ ಶಿಕ್ಷಣ ಸಂಸ್ಥೆ ಮುಂದೆ ಬಂದಿದೆ. ಗ್ರಾಮೀಣ ಹಾಗೂ ಬಡವರ್ಗದವರಿಗೂ ಈ ಸಂಸ್ಥೆ ಪೂರಕವಾಗಿದೆ ಎಂದರು.

ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಕುರಿತು ಚಿಂತಿಸಬೇಕು. ಶಿಸ್ತು ಅನ್ನುವುದು ಸೇತುವೆ ಇದ್ದಂತೆ. ಸೇತುವೆಯ ಮೇಲೆ ನಾವು ಸಾಗಬೇಕಾಗುತ್ತದೆ. ಯಶಸ್ಸು ಗಳಿಸಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇತ್ತೀಚೆಗೆ ಚಿಕ್ಕಪುಟ್ಟ ವಿಷಯಗಳಿಗೆ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ತಪ್ಪು. ಜೀವ ಕಳೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಅಬ್ದುಲ್ ಕಲಾಂರಂತಹ ಮಹಾನ್ ನಾಯಕರನ್ನು ನೆನೆದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಬರುವುದಿಲ್ಲ. ಅಂಥಹ ಸಾಧನೆಗಳನ್ನು ನೀವು ಮಾಡಬೇಕು ಎಂದು ಸಲಹೆ ನೀಡಿದರು.

ವಿಜ್ಞಾನ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದ  ಅಖಿಲ್ ಜಿ, ವಾಣಿಜ್ಯ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸಂಗೀತ ಕಾಮತ್, ಕಲಾವಿಭಾಗದಲ್ಲಿ ಚಿನ್ನದ ಪದಕ ಪಡೆದ ಲೋಹಿತ್ ಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಾತತ್ವ ಸಂಗ್ರಹಾಲಯದ ನಿರ್ದೇಶಕ ಗೋಪಾಲ್, ಪ್ರಾಂಶುಪಾಲ ನೀಲಕಂಠ, ಉಪಪ್ರಾಂಶುಪಾಲ ಎಂ.ಎಸ್.ವಿಜಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: