ಮೈಸೂರು

ಮುಜುಗರಕ್ಕೊಳಪಡಿಸುವ ಜಾಹೀರಾತು ಫಲಕ ತೆರವುಗೊಳಿಸಲು ಒತ್ತಾಯ

ಮೈಸೂರು,ಅ.24:- ಮೈಸೂರು-ಹುಣಸೂರು ರಸ್ತೆ, ಕಲಾಮಂದಿರದಿಂದ ವಾಲ್ಮೀಕಿ ರಸ್ತೆ ಜಂಕ್ಷನ್ ವರೆಗೆ ರಸ್ತೆ ಅಭಿವೃದ್ಧಿಗೊಂಡಿದ್ದು ಈ ಮಾರ್ಗದಲ್ಲಿ ಸಾಗುವವರು ಕೇವಲ ಜಾಹೀರಾತು ಫಲಕವೊಂದರಿಂದ ಇರಿಸು ಮುರಿಸು ಅನುಭವಿಸುವಂತಾಗಿದೆ. ಅದಕ್ಕೆ ಕಾರಣವಿಷ್ಟೇ. ಈ ಮಾರ್ಗದಲ್ಲಿ ಅರೆ ನಗ್ನ ಜಾಹೀರಾತು ಫಲಕಗಳು ರಾರಾಜಿಸುತ್ತಿದ್ದು, ಇದಕ್ಕೆ ಜನತೆಯಿಂದ ಆಕ್ರೋಶ ವ್ಯಕ್ತವಾಗಿದೆ.

ಕಲಾಮಂದಿರದಿಂದ ಪಡುವಾರಹಳ್ಳಿ ಜಂಕ್ಷನ್ ವರೆಗೆ ಮೈಸೂರು-ಹುಣಸೂರು ರಸ್ತೆಯನ್ನುಸಂಸದ ಪ್ರತಾಪ್ ಸಿಂಹ ಅವರು ಮುತುವರ್ಜಿ ವಹಿಸಿ ಅಗಲೀಕರಣಗೊಳಿಸಿ ರಸ್ತೆಯ ಎರಡೂ ಪಕ್ಕಗಳಲ್ಲಿಯೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದರು. ರಂಗಾಯಣ ಸಿಬ್ಬಂದಿ ವಸತಿಗೃಹಗಳ ಬಳಿ ಪುರುಷ ಮತ್ತು ಸ್ತ್ರೀ ಅರೆನಗ್ನ ಜಾಹೀರಾತು ಫಲಕವುಳ್ಳ ಜಾಹೀರಾತು ಫಲಕ ಒಂದನ್ನು ಅಳವಡಿಸಲಾಗಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಅಸಂಖ್ಯಾತ ಜನರು ತೆರಳುತ್ತಾರೆ. ಈ ಹೆದ್ದಾರಿಯಲ್ಲಿ ಮಹಿಳೆಯರ-ಪುರುಷರ ಒಳಉಡುಪುಗಳ ಜಾಹೀರಾತು ಫಲಕವೊಂದನ್ನು ಅಳವಡಿಸಲಾಗಿದೆ. ಇಂತಹ ಅಶ್ಲೀಲ ಜಾಹೀರಾತು ಪ್ರದರ್ಶನದಿಂದ ವಾಹನ ಸವಾರರ ಗಮನ ಬೇರೆಡೆ ಸೆಳೆದು ಅಪಘಾತಗಳು ಸಂಭವಿಸಬಹುದು. ಅದರಿಂದ ಈ ರಸ್ತೆಯಲ್ಲಿ ಅಳವಡಿಸಲಾಗಿರುವ ಅರೆನಗ್ನ ಜಾಹೀರಾತು ಫಲಕವನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ಸಾಂಸ್ಕೃತಿಕ ನಗರಿಯ ಅಂದವನ್ನು ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಮುಜುಗರಪಡಿಸುವ ಈ ಜಾಹೀರಾತು ಫಲಕವನ್ನು ತೆರವುಗೊಳಿಸುವಂತೆ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರೂ ಕೂಡ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: