ಮೈಸೂರು

ಯುದ್ಧ ರಫೇಲ್ ವಿಮಾನಗಳ ಖರೀದಿ-ಉತ್ಪಾದನೆಯಲ್ಲಿ ಭಾರೀ ಹಗರಣ : ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.24:- ಭಾರತದಲ್ಲಿ ಯುದ್ಧ ರಫೇಲ್ ವಿಮಾನಗಳ ಖರೀದಿ-ಉತ್ಪಾದನೆಯಲ್ಲಿ ಭಾರೀ ಹಗರಣ ಬೆಳಕಿಗೆ ಬಂದಿದ್ದು,ಪ್ರಧಾನಿ ಮೋದಿಯವರೇ ನೇರವಾಗಿ ನಡೆಸಿರುವ ವ್ಯವಹಾರವಾಗಿರುವುದರಿಂದ ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿ, ಭ್ರಷ್ಟಾಚಾರಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

ನ್ಯಾಯಾಲಯದ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಯುಪಿಎ-2ಸರ್ಕಾರ ಕೈಗೊಂಡಿದ್ದ ಒಪ್ಪಂದದಲ್ಲಿ ತಂತ್ರಜ್ಞಾನ ವರ್ಗಾವಣೆಯ ಷರತ್ತಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಮಾಡಿರುವ ವ್ಯವಹಾರದಲ್ಲಿ ತಂತ್ರಜ್ಞಾನ ವರ್ಗಾವಣೆಯ ಷರತ್ತು ಇಲ್ಲ. ಈಗ ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಏನಾಯಿತು? ನಾನೂ ತಿನ್ನಲ್ಲ, ತಿನ್ನಲು ಬಿಡೋದೂ ಇಲ್ಲ ಎಂದು ಘಂಟಾಘೋಷವಾಗಿ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಭದ್ರತೆಯನ್ನೇ ಅಡವಿಟ್ಟು ತಮ್ಮ ಆಪ್ತಮಿತ್ರ ಅಂಬಾನಿಗೆ ದೇಶವನ್ನು ಸುಲಿಗೆ ಮಾಡಲು ಹಾದಿ ಸುಗಮ ಮಾಡಿಕೊಟ್ಟಿರುವುದನ್ನು ಇಡೀ ಜಗತ್ತು ನೋಡುತ್ತಿದೆ. ಇದರಲ್ಲಿ ಇವರ ಪಾಲೇನು ಎಂಬ ಗುಮಾನಿಯೂ ಜನರನ್ನು ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರು ಉತ್ತರಿಸಬೇಕು ಎಂದರು. ರಾಷ್ಟ್ರದ ಭದ್ರತೆಗೆ ಧಕ್ಕೆ ತರಲಿರುವ ಹಾಗೂ ದೇಶದ ಬೊಕ್ಕಸವನ್ನು ಲೂಟಿ ಮಾಡುವ ರಫೇಲ್ ಯುದ್ಧ ವಿಮಾನದ ಖರೀದಿ ಉತ್ಪಾದನೆಯಲ್ಲಿ ಉಂಟಾಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರಗಳ ಸಮರ್ಪಕ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಹಕಾರ್ಯದರ್ಶಿ ಹೆಚ್.ಬಿ.ರಾಮಕೃಷ್ಣ, ಖಜಾಂಚಿ ಬಸವರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: