ಮೈಸೂರು

ಜ್ಯೋತಿಷ್ಯವನ್ನು ಸ್ವಾರ್ಥ ಹಾಗೂ ವ್ಯಾಪಾರಕ್ಕೆ ಬಳಸಬೇಡಿ: ಮಾಜಿ ಸಚಿವ ರಾಮದಾಸ್ ಅಭಿಮತ

ಜ್ಯೋತಿಷ್ಯವನ್ನು ಸ್ವಾರ್ಥ ಹಾಗೂ ವ್ಯಾಪಾರಕ್ಕೆ ಬಳಸಬೇಡಿ. ಪ್ರತಿಯೊಬ್ಬರ ಜೀವನದಲ್ಲಿಯೂ ಗ್ರಹಗತಿಗಳ ಚಲನೆಯಿಂದ ಒಳಿತು ಕೆಡುಕುಗಳು ಸಹಜ. ಇನ್ನೇನು ವಿಧಾನಸಭಾ ಚುನಾವಣೆ ಎದುರಾಗಲಿದ್ದು ರಾಜಕಾರಣಿಗಳು ಜ್ಯೋತಿಷ್ಯಿಗಳನ್ನು ಎಡತಾಕುವುದು ಸರ್ವೇ ಸಾಮಾನ್ಯವಾಗಿದ್ದು ಸ್ವಾರ್ಥ ಹಾಗೂ ವ್ಯಾಪಾರಿ ಮನೋಭಾವನೆಯನ್ನು ತೋರಬೇಡಿ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಜ್ಯೋತಿಷಿಗಳಿಗೆ ತಿಳಿ ಹೇಳಿದರು.

ಅವರು, ಶುಕ್ರವಾರ ರೋಟರಿ ಸಭಾಂಗಣದಲ್ಲಿ ಶ್ರೀ ಓಂಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ಉದ್ಘಾಟನೆ ಹಾಗೂ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿ, ಮಾಯನ್ ಕ್ಯಾಲೆಂಡರ್ ವಿಶ್ವದಲ್ಲಿಯೇ ವೈಜ್ಞಾನಿಕವಾಗಿದೆ. ಜನವರಿಗಿಂತಲೂ ಯುಗಾದಿಯಂದು ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಆರ್ಯರು ಸೂರ್ಯಪಥ ಮತ್ತು ದ್ರಾವಿಡರು ಚಂದ್ರಪಥದಂತೆ ಕ್ಯಾಲೆಂಡರ್‍ ತಯಾರಿಸಿ ಅದರಂತೆ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಅತಿ ಹೆಚ್ಚು ಕ್ಯಾಲೆಂಡರ್‍ಗಳು ಸೂರ್ಯ ಪಥ ಆಧಾರದಲ್ಲಿಯೇ ಇವೆ ಎಂದರು. ದಿನದರ್ಶಿಕೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣದಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೂ, ಮಹಾಭಾರತದಲ್ಲಿ ಯುದ್ಧಕ್ಕೂ ಪಂಚಾಂಗದ ಆಧಾರದ ಮೇಲೆ ಮುಹೂರ್ತ ನಿಗದಿಗೊಳಿಸಲಾಗಿತ್ತು ಎಂದು ದಿನದರ್ಶಿಕೆಗೂ ಪುರಾಣಕ್ಕೂ ಇರುವ ಸಾಮ್ಯತೆಯನ್ನು ತಿಳಿಸಿದರು.

indexಜ್ಯೋತಿಷ್ಯ ಶಾಸ್ತ್ರ ಮತ್ತು ಪಂಚಾಂಗವನ್ನು ವೇದಿಕ್ ಗಣಿತಶಾಸ್ತ್ರದ ಆಧಾರದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಿ ತಯಾರಿಸಲಾಗುತ್ತಿದೆ. ಭಾರತದಲ್ಲಷ್ಟೇ ಅಲ್ಲದೇ ಈಜಿಪ್ಟ್, ರೋಮನ್, ಇಥಿಯೋಪಿಯಾ ಹಾಗೂ ಇತರೇ ದೇಶಗಳಲ್ಲಿ 81ಕ್ಕೂ ಅಧಿಕ ದಿನದರ್ಶಿಕೆ ಮತ್ತು ಪಂಚಾಂಗಗಳಿವೆ. ಒಬ್ಬಬ್ಬ ರಾಜನ ಹೆಸರನ್ನು ತಿಂಗಳಿಗೆ ಇಡಲಾಗಿದೆ, ಬ್ರಿಟಿಷರ ಆಕ್ರಮಣವಾದಲ್ಲೆಲ್ಲ ಬ್ರಿಟಿಷ್ ಕ್ಯಾಲೆಂಡರ್ ತಂದರು ಎಂದ ಅವರು, ದೇಶ ಮುಂದುವರೆಯುವುದು ವಿಜ್ಞಾನ ಹಾಗೂ ಒಬ್ಬ ಮೋದಿಯಿಂದ ಮಾತ್ರವಲ್ಲ, ಮನೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕಾರ ತುಂಬಿ ಗುರುಹಿರಿಯರ ಬಗ್ಗೆ ಭಕ್ತಿ ಗೌರವ ತೋರುವ ಸಂಸ್ಕೃತಿ ಬೆಳೆಸಿ ದೇಶವನ್ನು ವಿಶ್ವಗುರುವಿನ ಸ್ಥಾನಕ್ಕೇರಿಸಿ ಎಂದು ರಾಮದಾಸ್ ಕರೆ ನೀಡಿದರು.

ಮಹಾರಾಜ ಸಂಸ್ಕೃತ ಪಾಠಶಾಲೆಯ ವಿಶ‍್ರಾಂತ ಶೈವಾಗಮ ಪ್ರಾಧ್ಯಾಪಕ ವಿದ್ವಾನ್ ಎಂ.ಮಲ್ಲಣ್ಣ ಸಂಸ್ಥೆಯ ನಾಮಫಲಕ ಅನಾವರಣಗೊಳಿಸಿದರು. ನಂತರ ಮಾತನಾಡಿ ಆಧ್ಯಾತ್ಮಿಕ ಚಿಂತನೆಯೂ ಸಮಾಜದಲ್ಲಿ ಮುಂದುವರೆಯಬೇಕಾದರೆ ಜ್ಯೋತಿಷ್ಯ ವಿಜ್ಞಾನ ಮುಖ್ಯ, ವೇದ ಹಾಗೂ ಶಾಸ್ತ್ರಾಧ್ಯಯನಕ್ಕೆ ಜಾತಿ ತೊಡಕಾಗಿಲ್ಲ ಅವರವರ ಆಯ್ಕೆಯಂತೆ ವಿಚಾರಗಳು ಸಾಗಿವೆ ಎಂದ ಅವರು, ಮನುಷ್ಯನ ಸುಸಂಸ್ಕೃತ ಸಂಸ್ಕಾರದಿಂದಲೇ ಶಾಸ್ತ್ರಗಳು ಚಿರಸ್ಥಾಯಿಯಾಗಿ ಉಳಿಯುವುದು. ಅಧ್ಯಯನ ದೃಷ್ಟಿಯಲ್ಲಿ ಜ್ಯೋತಿಷ್ಯ ಗ್ರಂಥಗಳೇ ವಿರಳವೆಂದು ಬೇಸರ ವ್ಯಕ್ತಪಡಿಸಿ ಪಂಡಿತರು ಈಗಾಗಲೇ ಅವುಗಳಿಂದ ಪಾರಂಗತರಾಗಿದ್ದಾರೆಂದು ತಿಳಿಸಿದರು.

ಸುತ್ತೂರು ಶ್ರೀಶಿವರಾತ್ರೀಶ್ವರ ಪಂಚಾಂಗಕರ್ತರ ಸಿದ್ಧಾಂತಿ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀನೀಲಕಂಠಸ್ವಾಮಿ ಮಠಾಧ್ಯಕ್ಷ ವಿದ್ವಾನ್ ಸಿದ್ಧಮಲ್ಲಸ್ವಾಮಿ ಸಾನಿಧ್ಯ ವಹಿಸಿದ್ದರು.

ಜ್ಯೋತಿರ್ವಿದ್ವಾಂಸರಾದ ನಾಗರಾಜು ಭಟ್ಟಾಚಾರ್, ವಿ.ಕೇಶವಮೂರ್ತಿ, ಅರಮನೆ ಜ್ಯೋತಿಷ್ಯ ಪರಂಪರೆಯ ಕಿರಣ್ ಕುಮಾರ್ ಶರ್ಮ, ಭಾರತೀಯ ಕೃಷಿ ಸಮಾಜ ಮೈಸೂರು ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಟೇಲ್, ಚಾಮರಾಜನಗರ ಜಿಲ್ಲಾಧ್ಯಕ್ಷ ಶಾಂತ ಮಹಾದೇವ ಪ್ರಸಾದ್  ಹಾಗೂ ಉದ್ಯಮಿ ಜಗದೀಶ್ , ಓಂಕಾರ ಟ್ರಸ್ಟ್ ಅಧ್ಯಕ್ಷ ಮಹದೇವಸ್ವಾಮಿ.ವೈ.ಎಲ್  ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ನವೀನ್ ಅವರ ಸಂಸ್ಕೃತ ಶ್ಲೋಕ ಪಠಣದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 

 

Leave a Reply

comments

Related Articles

error: