ಮೈಸೂರು

‘ಕುಣಿಯುವ ಹೆಜ್ಜೆಗೆ ಗೆಜ್ಜೆಯ ಮೇಳ’: ಆರ್ಟಿಕ್ಯುಲೇಟ್ ಫೆಸ್ಟಿವೆಲ್‍ನಲ್ಲಿ ಜರ್ಮನಿ ಕಲಾವಿದೆಯ ಮೈನವಿರೇಳಿಸಿದ ಕಥಕ್ ನೃತ್ಯ

ಮೈಸೂರು, ಅ.25:- ನಗರದ ಗಾನಭಾರತಿ ಸಭಾಂಗಣದಲ್ಲಿ ಮೈಸೂರು ಬಿ.ನಾಗರಾಜ್‍ ಅವರ ನೇತೃತ್ವದಲ್ಲಿ ಈಚೆಗೆ ಆರ್ಟಿಕ್ಯುಲೇಟ್ ಫೆಸ್ಟಿವೆಲ್-29ರ ಸಂಚಿಕೆಯಲ್ಲಿ ನಾಲ್ಕು ಮಂದಿ ಕಲಾವಿದರು ಭರತನಾಟ್ಯ, ಕಥಕ್ ಹಾಗೂ ಒಡಿಸ್ಸಿ ನೃತ್ಯಗಳನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿ ನವರಾತ್ರಿಯ ಹಬ್ಬಕ್ಕೆ ವರ್ಣರಂಜಿತ ತೆರೆ ಎಳೆದರು.

ಭರತನಾಟ್ಯವು ವೇದ, ಯೋಗ, ಸಂಗೀತ ಈ ಮೂರರ ಸಮ್ಮಿಲನ. ಕಲಾಪ್ರಿಯರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುತ್ತಾ ಸಾಗುತ್ತದೆ ಈ ನೃತ್ಯ ಪಯಣ. ಕರ್ನಾಟಕ ಕಲಾಶ್ರೀ ಗುರು ಡಾ.ಸುಪರ್ಣ ವೆಂಕಟೇಶ್‍ ಅವರ ಶಿಷ್ಯೆ ಆಶಿತಾ ರಾಜೇಶ್‍ ಎರಡು ಬಗೆಯಲ್ಲಿ ಸಂಯೋಜನೆ ಮಾಡಲಾದ ಭರತನಾಟ್ಯ ಪ್ರದರ್ಶನ ನೀಡಿದರು. ಇದರಲ್ಲಿ ಒಂದು ಸಾಹಿತ್ಯದ ಬಗ್ಗೆ ಹಾಗೂ ಇನ್ನೊಂದು ನೃತ್ಯದ ಬಗ್ಗೆ ಪ್ರದರ್ಶನವನ್ನು ನೀಡಿದರು. ಈ ಎರಡು ಬಗೆಯ ಪ್ರದರ್ಶನದಲ್ಲಿ ಒಂದು ರಾಗ ಲವಂಗಿ-ಆದಿತಾಳ ಇದು ನಟರಾಜ ಅವರ ಕೃತಿಯಲ್ಲಿ ‘ಕರುಣದಿ ಕಾಯೋ ನಟರಾಜ’ ಎಂಬುದಾಗಿ ಸಂಯೋಜಿಸಲ್ಪಟ್ಟಿದ್ದು ಇನ್ನೊಂದು ರಾಗ ಆಂದೋಲಿಕ-ಆದಿತಾಳದ್ದಾಗಿದ್ದು, ಸರಸ್ವತಿಯ ಮೂಲದ್ದಾಗಿದ್ದು ‘ಆನಂದ ರೂಪಿಣಿ’ ಎಂಬುದಾಗಿತ್ತು.

ಇಂದಿನ ವಿಶೇಷ ಸಂಚಿಕೆಯ ಕೇಂದ್ರಬಿಂದು ಜರ್ಮನಿಯಿಂದ ಆಗಮಿಸಿದ್ದ ಹಿರಿಯ ಪಂಡಿತರಾದ ಬಿರ್ಜು ಮಹಾರಾಜ್ ಶಿಷ್ಯರಾದ ದುರ್ಗಾ ಆರ್ಯ-ಕ್ರುಜರ್. ಇವರ ಕಥಕ್ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇವರು ತಮ್ಮ ನೃತ್ಯವನ್ನು ಬಿರ್ಜುಮಹಾರಾಜರ ಅರ್ಧನಾರೀಶ್ವರರ ಸಂಯೋಜನೆಯೊಂದಿಗೆ ಪ್ರಸ್ತುತಪಡಿಸಿದ್ದು, ಇವರೊಂದಿಗೆ ವಿಭಾ ರಾಮಸ್ವಾಮಿ, ನಿಶಾಂತ್ ಪಾಣಿಕರ್ ಮತ್ತು ಲಕ್ಷ್ಮೀನಾರಾಯಣ್ ಜೇನಾ ಅವರುಗಳು ಡಮರ್ ತಾಳಕ್ಕೆ ನೃತ್ಯ ಪ್ರದರ್ಶನ ನೀಡಿದರು. ಇವರ ಅಂತಿಮ ಪ್ರಸ್ತುತಿ ಕನ್ನಡದಲ್ಲಿ ನೀಡಿದ್ದು, ದುರ್ಗಾರವರು ಹರಿದಾಸ ಶ್ರೀ ಪುರಂದರದಾಸರ ರಚನೆಯನ್ನು ಅದ್ಭುತವಾಗಿ ಪದಗಳು ಹಾಗೂ ಭಾವನಾತ್ಮಕವಾಗಿ ತರ್ಜುಮೆ ಮಾಡಿ ಪರಿಣಾಮಕಾರಿಯಾಗಿ ಎಲ್ಲರಿಗೂ ಸಹ ಅವರ ಚಲನೆ ಹಾಗೂ ಮುಖಭಾವದ ನೋಡುವಿಕೆಯನ್ನು ಅರ್ಥವಾಗುವ ರೀತಿಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಮೋಹಕ ಅಭಿನಯ, ಆಕರ್ಷಕ ನೃತ್ಯ ಭಂಗಿಯ ಮೂಲಕ ಕಲಾರಸಿಕರ ಮನಸ್ಸಿನಲ್ಲಿ ನೆಲೆಯೂರಿದವರು ಬನಶ್ರೀ ಮೋಹಪಾತ್ರ. ದೇಶ ವಿದೇಶಗಳ ನೃತ್ಯ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಅವರು ಕಳೆದ ಏಳು ವರ್ಷಗಳಿಂದ ಬೆಂಗಳೂರನ್ನೇ ತಮ್ಮ ಕಾರ್ಯಕ್ಷೇತ್ರವಾಗಿರಿಸಿಕೊಂಡಿದ್ದಾರೆ. ಇವರ ಒಡಿಸ್ಸಿ ನೃತ್ಯವು ಪರಿಣಾಮಕಾರಿಯಾಗಿತ್ತು. ಇವರು ಪಲ್ಲವಿಯಲ್ಲಿ ರಾಗಶ್ರೀ ಮತ್ತು ಏಕತಾಳಿ ತಾಳದ ಮೂಲಕ ನೃತ್ಯವನ್ನು ಪ್ರಾರಂಭಿಸಿದರು. ಎರಡನೆಯದು ಅಭಿನಯವಾಗಿದ್ದು ಇದು ಒಡಿಯಾ ಭಾಷೆಯಲ್ಲಿದ್ದು ಇದರಲ್ಲಿ ಸಖಿಯು ರಾಧಾಳನ್ನು ಅಂದರೆ ಆಕೆಯು ಕೃಷ್ಣನೊಂದಿಗೆ ಅತಿಯಾದ ಪ್ರೀತಿಯನ್ನು ಹೊಂದಿದವಳಾಗಿದ್ದು, ಇದರ ಬಗ್ಗೆ ಆಕೆಯು ಯಾವ ರೀತಿಯಲ್ಲಿ ತನ್ನ ನಡೆಯನ್ನು ಹೊಂದಿದ್ದಳು ಎಂಬುದರ ಬಗ್ಗೆ ಪಟ್ಟಣದಲ್ಲಿ ಪ್ರದರ್ಶನ ಮಾಡಿದ ದೃಶ್ಯ ಮನಮೋಹಕವಾಗಿತ್ತು. ಇವರ ಅಭಿನಯ ಅದ್ಭುತವಾಗಿತ್ತು ಹಾಗೂ ಎರಡು ಅಂದರೆ ಭಾವನಾತ್ಮಕವಾದದ್ದು ಹಾಗೂ ಭಕ್ತಿಬಾವದ ಬಗ್ಗೆ ಅವರ ಸಂಯೋಜನೆಯು ‘ಬಾಜುಚ್ಚಿ ಸಹಿ ಬಾಜಾರೆ’ ಆಗಿತ್ತು.

ಗುರು ಡಾ.ಸೌಂದರ್ಯ ಶ್ರೀವತ್ಸರವರ ಶಿಷ್ಯೆ ವಾಂಗ್ಮಯಿ ಪ್ರಸಾದ್‍ ಅವರ ಆಯ್ಕೆಯ ಭರತನಾಟ್ಯ ಪ್ರದರ್ಶನ ಬಹಳ ಅಚ್ಚುಕಟ್ಟಾಗಿತ್ತು. ಇವರು ಆಯ್ಕೆ ಮಾಡಿಕೊಂಡಿದ್ದು ಬಿಲಹರಿ ರಾಗ-ಆದಿತಾಳ ಸಂಯೋಜನೆಯಾಗಿದ್ದು, ಮೈಸೂರು ವಾಸುದೇವಚಾರ್ಯರ ರಚನೆಯಾದ ‘ಶ್ರೀ ಚಾಮುಂಡೇಶ್ವರಿ ಪಾಲಯಮಾಂ’ ಆಗಿತ್ತು. ಇದು ಮೈಸೂರು ನಾಡ ದೇವತೆಯ ಬಗ್ಗೆಯಾಗಿತ್ತು. ಇವರ ಎರಡನೆಯ ಪ್ರದರ್ಶನ ಜಾವಳಿಯಾಗಿದ್ದು ‘ಇದೇನೇ ಸಖಿ’ ಎಂಬುದಾಗಿದ್ದು, ಇದು ರಾಗ ಬೇಹಾಣ್ ಹಾಗೂ ಆದಿತಾಳದಲ್ಲಿತ್ತು. ಇವರು ಅಂತಿಮವಾಗಿ ಕಾಸ್ಮಿಕ್ ನೃತ್ಯಪಟುವಿನ ನೃತ್ಯದೊಂದಿಗೆ ಸಂಯೋಜಿಸಿ ಉತ್ತಮ ಪಾದ ಚಲನೆಯೊಂದಿಗೆ ಪ್ರದರ್ಶಿಸಿದರು.  ಇದನ್ನು ಎಲ್ಲ ಸಂಗೀತ ವಾದ್ಯಗೋಷ್ಠಿಯ ಜೊತೆಗೆ ಪದ್ಮಚರಣರ ರಚನೆಯನ್ನು ಪೂರ್ವಿ ಕಲ್ಯಾಣಿ ರಾಗ ಹಾಗೂ ಆದಿತಾಳದಲ್ಲಿದ್ದು, ಇದು ‘ಪ್ರದೋಷ ಸಮಯದಿ ಪರಶಿವ ತಾಂಡವ’ ಎಂಬುದಾಗಿತ್ತು. ಒಟ್ಟಿನಲ್ಲಿ ಆರ್ಟಿಕ್ಯುಲೇಟ್ ಫೆಸ್ಟಿವೆಲ್ ಸಂಚಿಕೆ ಅವಿಸ್ಮರಣೀಯವಾಗಿತ್ತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: