
ಮೈಸೂರು
ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ: ಸದಸ್ಯರ ಆರೋಪ
ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ಉಂಟಾಗಿರುವ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ವಿವಿಧ ಇಲಾಖೆಗಳಿಗೆ ಸರ್ಕಾರದಿಂದ ಬಂದಿರುವ ಅನುದಾನ ಮತ್ತು ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಲಿಖಿತ ಮಾಹಿತಿಯನ್ನು ನೀಡುವಂತೆ ಸದಸ್ಯರು ಒತ್ತಾಯಿಸಿದರು.
ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ನೀರು ಮತ್ತು ಬರದ ಕುರಿತು ಚರ್ಚಿಸಿದರು.
ಮೈಸೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ರಾಜ್ಯ ಸರ್ಕಾರವು ಘೋಷಿಸಿದ್ದರೂ ಜಿಲ್ಲಾಡಳಿತ ಬರ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಮಾತು ಸಭೆಯಲ್ಲಿ ಪ್ರತಿಧ್ವನಿಸಿತು. ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರು ಬರ ನಿರ್ವಹಣೆ ಕುರಿತು ನಿರ್ಲಕ್ಷ್ಯ ಮನೋಭಾವ ತೋರಲಾಗಿದೆ. ಜಿಲ್ಲೆಯಲ್ಲಿ ಯಾವ ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಎಷ್ಟು ಪ್ರಮಾಣದ ಮೇವು ಸಂಗ್ರಹವಾಗಿದೆ ಎನ್ನುವ ಕುರಿತು ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಮುಂದಾಗಬೇಕು. ಬರ ನಿರ್ವಹಣೆಗಾಗಿ ಪ್ರತಿ ಪಂಚಾಯಿತಿಗೆ 5 ಲಕ್ಷ ರೂ. ಅನುದಾನ ನೀಡಬೇಕೆಂದು ಒತ್ತಾಯಿಸಿದರು. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಎಷ್ಟು ಮಂದಿ ರೈತರಿಗೆ ಪರಿಹಾರ ನೀಡಲಾಗಿದೆ ಎನ್ನುವುದರ ಕುರಿತು ವಿವರ ನೀಡಿ ಎಂದು ಆಗ್ರಹಿಸಿದರು.
ಸದಸ್ಯ ಬೀರಿಹುಂಡಿ ಬಸವಣ್ಣ ಮಾತನಾಡಿ, ಸರ್ಕಾರ ಮೈಸೂರು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ 4 ತಿಂಗಳು ಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸರ್ಕಾರವು ಮೇವು ಕೇಂದ್ರಗಳ ಮೂಲಕ 90 ದಿನಗಳ ಕಾಲ ಸತತವಾಗಿ ಮೇವನ್ನು ವಿತರಿಸುವಂತೆ ತಿಳಿಸಿದೆ. ಆದರೆ ಇಲ್ಲಿ ನೀಡುವ ಮೇವಿನ ಗುಣಮಟ್ಟ ಉತ್ತಮವಾಗಿಲ್ಲ ಎಂದರು. ಉಳಿದ 10 ಕಡೆಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಹಣದ ಕೊರತೆ ಇರುವ ಬಗ್ಗೆ ತಮಗೆ ಮಾಹಿತಿ ನೀಡಿದಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರಲ್ಲದೇ, ಕೇವಲ ಮೇವು ಸಂಗ್ರಹಣಾ ಘಟಕ ಸ್ಥಾಪಿಸಿದರೆ ಸಾಲದು. ಇದರೊಂದಿಗೆ ಗೋ ಶಾಲೆಗಳನ್ನು ಸ್ಥಾಪಿಸಿದರೆ ಒಳ್ಳೆಯದು. ಅಧಿಕಾರಿಗಳು ಪ್ರತಿ ಪಂಚಾಯಿತಿಗೆ ತೆರಳಿ ಕುಡಿಯುವ ನೀರು ಮೇವು ಸಂಗ್ರಹಣಾ ವರದಿಯನ್ನು ಶೇಖರಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿನ ಕಂದಾಯ ಮತ್ತು ಇತರೆ ಅಧಿಕಾರಿಗಳು ಬರ ನಿರ್ವಹಣೆ ಕುರಿತು ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿಯುವ ನೀರಿನ ಅಗತ್ಯತೆ ಹಾಗೂ ಜಾನುವಾರುಗಳ ಮೇವಿನ ಕುರಿತಂತೆ ವರದಿಯನ್ನು ಕ್ರೋಢೀಕರಿಸಿ 15 ಕೋಟಿ 70 ಲಕ್ಷ ರೂ.ಗಳ ಆರ್ಥಿಕ ಸಹಾಯದ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಇದುವರೆಗೆ 4 ಕೋಟಿ 80 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೈಂಬಳ್ಳಿ ನಟರಾಜ್ ಹಾಗೂ ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.