ಮೈಸೂರು

ಮರಗಿಡಗಳನ್ನು ಕಡಿದು ಪರಿಸರ ಬರಿದು ಮಾಡಿದರೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಉಸಿರಾಡುವ ಪರಿಸ್ಥಿತಿ ಬರಬಹುದು : ಡಾ. ದಯಾನಂದ್ ಕಳವಳ

ಮೈಸೂರು,ಅ.27:- ಮರಗಿಡಗಳನ್ನು ಕಡಿದು ಪರಿಸರ ಬರಿದು ಮಾಡಿದರೆ ಮುಂದೊಂದು ದಿನ ಆಕ್ಸಿಜನ್ ಸಿಲಿಂಡರ್ ನ್ನು ಬೆನ್ನಿಗೆ ಕಟ್ಟಿಕೊಂಡು ಉಸಿರಾಟ ನಡೆಸಬೇಕಾದ ಪರಿಸ್ಥಿತಿ ಬರಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ದಯಾನಂದ್ ಕಳವಳ ವ್ಯಕ್ತಪಡಿಸಿದರು.

ಜಯಲಕ್ಷ್ಮಿಪುರಂನಲ್ಲಿರುವ ಸಂತಜೋಸೆಫರ ಪದವಿಪೂರ್ವ ಕಾಲೇಜು ವತಿಯಿಂದ ಇಂದು ‘ಮಾಲಿನ್ಯ ಮುಕ್ತ ವಲಯಗಳ ಅಗತ್ಯ ಮತ್ತು ಮಾಲಿನ್ಯದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ’ ಕುರಿತು ಜನರಲ್ಲಿ ಅರಿವು ಮೂಡಿಸುವ ಸೈಕಲ್ ಜಾಥಾವನ್ನು ಆಯೋಜಿಸಿದ್ದು, ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ನಮಗಾಗಿ ಇರುವ ಒಂದೇ ಒಂದು ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸಾಕಷ್ಟು ಪ್ರಮಾಣದಲ್ಲಿ ಭೂಮಿಯನ್ನು ಮಾಲಿನ್ಯ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ಸೈಕಲ್ ಜಾಥಾ ನಡೆಸಿ ಅರಿವು ಮೂಡಿಸುವುದು ಸಂತಸದ ವಿಚಾರ ಎಂದರು. ಅರ್ಬನ್ ಏರಿಯಾಗಳಲ್ಲಿ ಉಸಿರಾಡಲು ಶುದ್ಧ ಗಾಳಿಯೇ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ವಾಯುಮಾಲಿನ್ಯವುಂಟಾಗಿದೆ. ಬೆಂಗಳೂರು ನಗರದಲ್ಲಂತೂ ವಾಸ ಮಾಡೋದೇ ಕಷ್ಟವಾಗಿದೆ. ಆಮ್ಲಜನಕ ಸಿಗುತ್ತಿಲ್ಲ. ಮರಗಿಡಗಳನ್ನು ಕಡಿಯಲಾಗುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿ ಉಸಿರಾಡುವ ಪರಿಸ್ಥಿತಿ ಬರಬಹುದು ಎಂದರು. ವಾಹನಗಳ ಬಳಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿ. ಸೈಕಲ್ ಜಾಥಾ ಸಾಂಕೇತಿಕವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಹೋಗುವಾಗ ಸೈಕಲ್ ಬಳಸಿದರೆ ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು. ಜೊತೆಜೊತೆಗೆ ವಾಸ ಮಾಡುವ ಸ್ಥಳಗಳಲ್ಲಿ ಗಿಡಮರಗಳನ್ನು ಬೆಳೆಸುವ ಕೆಲಸಕ್ಕೂ ಪ್ರೋತ್ಸಾಹ ನೀಡಬೇಕು. ಇಂದು ವಿದ್ಯಾರ್ಥಿಗಳೆಲ್ಲರೂ ಈ ಭೂಮಿಯನ್ನು ಉಳಿಸಿಕೊಡುತ್ತೇವೆ. ಗಿಡಮರಗಳನ್ನು ಬೆಳೆಸುತ್ತೇವೆ. ಸೈಕಲ್ ಬಳಸಿ ವಾತಾವರಣ ಕಾಪಾಡುತ್ತೇವೆ ಎಂದು ಸಂಕಲ್ಪ ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ  ರೆ.ಫಾ.ವಿಜಯಕುಮಾರ್, ರೆ.ಫಾ ಪ್ರವೀಣ್, ಸಿಇಓ ಮಣಿ, ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಜಾಥಾವು ಕರ್ನಾಟಕ ರಾಜ್ಯ ಮುಕ್ತವಿವಿ, ಕೆ.ಡಿ.ರೋಡ್, ವಿವಿಪುರಂ ಪೊಲೀಸ್ ಠಾಣೆ, ಕೆ.ಆರ್.ಎಸ್.ರೋಡ್, ಚೆಲುವಾಂಬಾ ಪಾರ್ಕ್, ಕಿಂಗ್ ಕೋರ್ಟ್, ಮೆಟ್ರೋಪೊಲ್ ಸರ್ಕಲ್ ಮೂಲಕ ಸಾಗಿ ಬಂತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: