ಕರ್ನಾಟಕಪ್ರಮುಖ ಸುದ್ದಿ

ಮೆಟ್ರೋ – ಬಿಎಂಟಿಸಿ ಪ್ರಯಾಣಕ್ಕೆ ಒಂದೇ ಕಾರ್ಡ್ ವಿತರಿಸಲು ಚಿಂತನೆ: ಡಾ.ಜಿ. ಪರಮೇಶ‍್ವರ್

ಬೆಂಗಳೂರು (ಅ.27): ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಸಂಚರಿಸಲು ‘ಕಾಮನ್‌ ಫೇರ್‌ ಕಾರ್ಡ್‌’ ಪರಿಚಯಿಸಲು ಚಿಂತನೆ ನಡೆಸಿದ್ದು, ಉಪಚುನಾವಣೆ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ದಿನ ಮೆಟ್ರೋದಲ್ಲಿ ಸುಮಾರು ಐದು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೆಟ್ರೋ ರೈಲುಗಳನ್ನು ಮೂರು ಬೋಗಿಗಳಿಂದ ಆರು ಬೋಗಿ ರೈಲುಗಳನ್ನಾಗಿ ಹಂತ ಹಂತವಾಗಿ ಪರಿವರ್ತಿಸಲಾಗುವುದು. ಆ ನಂತರ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯೂ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬಿಎಂಟಿಸಿ ಹಾಗೂ ಮೆಟ್ರೋದಲ್ಲಿ ಸಂಚರಿಸಲು ಒಂದೇ ಕಾರ್ಡ್‌ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಕುರಿತು ಸಂಬಂಧಪಟ್ಟಅಧಿಕಾರಿಗಳು, ಸಚಿವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮೆಟ್ರೋ 2ನೇ ಹಂತ 2020ರೊಳಗೆ ಮೈಸೂರು ರಸ್ತೆ, ತುಮಕೂರು ರಸ್ತೆ ಪೂರ್ಣಗೊಳ್ಳಲಿದೆ. ವೈಟ್‌ಫೀಲ್ಡ್‌, ಆರ್‌ವಿ ರಸ್ತೆ, ಬೊಮ್ಮಸಂದ್ರ ಮಾರ್ಗವು 2021ಕ್ಕೆ ಪೂರ್ಣಗೊಂಡರೆ, ಗೊಟ್ಟಿಗೆರೆ- ನಾಗವಾರ ಮಾರ್ಗ 2023ಕ್ಕೆ ಮುಗಿಯಲಿದೆ. ಈ ಹಂತಕ್ಕೆ 26,405 ಕೋಟಿ ವೆಚ್ಚವಾಗಲಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳುವುದರೊಳಗೆ ವೆಚ್ಚ 32 ಸಾವಿರ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ನಿರ್ಮಾಣ ಕುರಿತು 15 ದಿನದೊಳಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. (ಎನ್.ಬಿ)

Leave a Reply

comments

Related Articles

error: