
ಬೆಂಗಳೂರು,ಅ.27-ಮೀಟೂ ಆರೋಪಕ್ಕೆ ಗುರಿಯಾಗಿರುವ ನಟ ಅರ್ಜುನ್ ಸರ್ಜಾ ಪರವಾಗಿ ಮಾತನಾಡಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿದ್ದು, ಹಣದ ಆಮಿಷವನ್ನು ಒಡ್ಡುತ್ತಿದ್ದಾರೆ ಎಂದು ಹರ್ಷಿಕಾ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಹರ್ಷಿಕಾ, ನನಗೆ ಎರಡು ದಿನಗಳಿಂದ ಹೆಸರಾಂತ ವ್ಯಕ್ತಿಗಳಿಂದ ಬೆದರಿಕೆ ಸಂದೇಶಗಳು, ಕರೆಗಳು ಬರುತ್ತಿವೆ, ನನ್ನನ್ನು ಸುಮ್ಮನಾಗಿಸಲು ಹಣದ ಆಮೀಷ ಒಡ್ಡುತ್ತಿದ್ದಾರೆ. ಬೆದರಿಕೆ ಕರೆ, ಸಂದೇಶಗಳು ಹೀಗೆ ಮುಂದುವರೆದರೆ ನಾನು ಪೊಲೀಸ್ ದೂರು ನೀಡುತ್ತೇನೆ. ಕೆಚ್ಚೆದೆಯ ಕನ್ನಡಿತಿಯಾದ ನಾನು ಸದಾ ಸತ್ಯದ ಪರ ಎಂದಿದ್ದಾರೆ.
ಜೊತೆಗೆ ಪತ್ರವೊಂದನ್ನು ಬರೆದಿರುವ ಹರ್ಷಿಕ, ಕೆಲವು ವರ್ಷಗಳ ಹಿಂದೆ, ಹಣ, ಅವಕಾಶ, ಶ್ರೀಮಂತ ಬದುಕಿಗಾಗಿ ಎಲ್ಲವನ್ನೂ ಮಾಡಿದ ಅವಕಾಶವಾದಿ ಹೋರಾಟಗಾರ್ತಿ ನಟಿಯರೇ ಇಂದು ಅದೇ ಗಂಡಸರ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬರೆದಿದ್ದಾರೆ.
ಇಂದು ಇತರರ ಮೇಲೆ ಆರೋಪ ಮಾಡುತ್ತಿರುವ ನಟಿಯರೇ ವಿದೇಶಗಳಲ್ಲಿ ಖ್ಯಾತ ನಿರ್ಮಾಪಕರುಗಳ ಜೊತೆ ಗಾಂಜಾ ಸೇದುತ್ತಾ, ಲಲ್ಲೆ ಹೊಡೆಯುತ್ತಿದ್ದುದನ್ನು, ನಾನು ಹೇಳಲಾಗದ ಕಾರ್ಯಗಳನ್ನು ಮಾಡಿರುವುದನ್ನು ನಾನು ಕಂಡಿದ್ದೇನೆ ಎಂದು ಹರ್ಷಿಕಾ ಹೇಳಿದ್ದಾರೆ. ಜೊತೆಗೆ ಕೆಲವು ವಿಡಿಯೋಗಳನ್ನೂ ನೋಡಿದ್ದೇನೆ ಎಂದು ಸಹ ಅವರು ಬರೆದುಕೊಂಡಿದ್ದಾರೆ.
#ಮೀಟೂ ನಟಿಯರು ಗಾಂಜಾ ಸೇದುತ್ತಾ, ಯಾವ, ಯಾವ ನಟರ ಹೆಸರನ್ನು ಹೇಗೆ ಹಾಳು ಮಾಡಬಹುದು ಎಂದು ಮಾತನಾಡಿಕೊಳ್ಳುತ್ತಿದ್ದ ವಿಡಿಯೋವನ್ನು ನಾನು ನೋಡಿದ್ದೇನೆ ಎಂದು ಹೊಸ ಬಾಂಬ್ ಅನ್ನು ಹರ್ಷಿಕಾ ಟ್ವಿಟ್ಟರ್ನಲ್ಲಿ ಸಿಡಿಸಿದ್ದಾರೆ.
ಎರಡೂ ಕೈ ಇಲ್ಲದೆ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ನಟಿಯರು ಅವಕಾಶ ನೀಡಿದ್ದಕ್ಕಾಗಿಯೇ ಲೈಂಗಿಕ ಕಿರುಕುಳ ಆಗಿವೆ. ಈಗ ಆರೋಪಿಸುತ್ತಿರುವ ನಟಿಯರು ಕಿರುಕುಳ ನಡೆದಾಗಲೇ ನಮಗಿದು ಸರಿ ಬರುತ್ತಿಲ್ಲ ಎಂದು ಹೇಳಿದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ನಾನು ಹಾಗೆ ಹೇಳಿದ್ದೇನೆ ಆದರೂ ನಾನು ಚಿತ್ರರಂಗದಲ್ಲಿ ಇಷ್ಟು ವರ್ಷ ಉಳಿದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. (ಎಂ.ಎನ್)