ಪ್ರಮುಖ ಸುದ್ದಿ

ಕೊಡವರ ಸ್ವಯಂ ನಿರ್ಣಯ ಹಕ್ಕಿಗಾಗಿ ಆಗ್ರಹ : ನ.1 ರಂದು ಸಿಎನ್‍ಸಿ ದೆಹಲಿ ಚಲೋ ಸತ್ಯಾಗ್ರಹ

ರಾಜ್ಯ(ಮಡಿಕೇರಿ) ಅ.29 :- ಕೊಡವರ ಸ್ವಯಂ ನಿರ್ಣಯ ಹಕ್ಕು ಮತ್ತು ಭೂ ರಾಜಕೀಯ ಆಶೋತ್ತರಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ವತಿಯಿಂದ ನ.1 ರಂದು 24ನೇ ವರ್ಷದ ನವದೆಹಲಿ ಚಲೋ ಸತ್ಯಾಗ್ರಹ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ನವದೆಹಲಿ ಚಲೋ ಸತ್ಯಾಗ್ರಹದಲ್ಲಿ ಕೊಡಗಿನ ವಿವಿಧೆಡೆಗಳ 50 ಮಂದಿ ಕೊಡವ ಕೊಡವತಿಯರು ಸಾಂಪ್ರದಾಯಿಕ ಉಡುಪಿನೊಂದಿಗೆ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 2 ರಂದು ದೇವಟ್‍ಪರಂಬುವಿನಲ್ಲಿ ಟಿಪ್ಪು ಸುಲ್ತಾನ್‍ನಿಂದ ನಡೆದ ನರಮೇಧಕ್ಕೆ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಫ್ರೆಂಚ್ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕೊಡವರ ಬಹಿರಂಗ ಕ್ಷಮೆ ಯಾಚನೆ ಮಾಡಬೇಕೆಂದು ಒತ್ತಾಯಿಸಿ ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಫ್ರೆಂಚ್ ರಾಯಭಾರ ಕಛೇರಿ ಮುಂಭಾಗ ಶಾಂತಿಯುತ ಸತ್ಯಾಗ್ರಹ ನಡೆಸಲಿದೆಯೆಂದು ತಿಳಿಸಿದರು.

ಕೊಡವರ ಸಾಂಪ್ರದಾಯಿಕ ಜನ್ಮ ಭೂಮಿಯಾದ ಕೊಡಗು 1956 ರ ನ.1 ರಂದು ವಿಶಾಲ ಮೈಸೂರು ರಾಜ್ಯ, ಈಗಿನ ಕರ್ನಾಟಕದೊಂದಿಗೆ ವಿಲೀನಗೊಂಡಿತು. ಆ ನಂತರದ ದಿನಗಳಲ್ಲಿ ಕೊಡವರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಲೆ ಬಂದಿದೆಯೆಂದು ಆರೋಪಿಸಿದ ನಾಚಪ್ಪ, ಇದರೊಂದಿಗೆ ಕೊಡಗಿನ ಜನತೆಯ ಭಾವನೆಗಳಿಗೆ ವಿರುದ್ಧವಾಗಿ ಕೊಡಗಿನ ಕೊಡವರ ನರಮೇಧಕ್ಕೆ ಕಾರಣನಾದ ಟಿಪ್ಪು ಸುಲ್ತಾನನ ಜಯಂತಿಯ ಆಚರಣೆಯ ಮೂಲಕ ಗಾಯದ ಮೇಲೆ ಉಪ್ಪು ಸವರುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡಿಕೊಂಡು ಬರುತ್ತಿರುವುದಾಗಿ ಆರೋಪಿಸಿದರು.

ಕೊಡವ ಸಮುದಾಯದ ಸಾಂವಿಧಾನಿಕ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಕಳೆದ ಸಾಲಿನ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭರವಸೆಯನ್ನು ನೀಡಿದ್ದರು. ಇದಕ್ಕೆ ಅನುಗುಣವಾಗಿ ಅವರು ಕೊಡವ ಸ್ವಾಯತ್ತತೆ ಸಂಬಂಧ ಸಂವಿಧಾನದ 244 ವಿಧಿ ರೆಡ್ ವಿತ್ ಶೆಡ್ಯೂಲ್ 6 ಮತ್ತು 8 ರ ಪ್ರಕಾರ ರಾಜ್ಯ ಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿರುವ ಬಗ್ಗೆ ಮೆಚ್ಚುಗೆಯನ್ನು ನಾಚಪ್ಪ ವ್ಯಕ್ತಪಡಿಸಿದರು.

ತೀವ್ರ ಅಸಮಾಧಾನ- ಸಿಎನ್‍ಸಿಯು ಶಾಸನಬದ್ಧ ಹಕ್ಕೊತ್ತಾಯಗಳನ್ನು ಮನ್ನಿಸಿದ ಕೇಂದ್ರ್ರ ಸರ್ಕಾರ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸುವ ಸಲುವಾಗಿ ‘ಸಮಗ್ರ ಕುಲ ಶಾಸ್ತ್ರ ಅಧ್ಯಯನ’ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಕೊಡವ ಕುಲಶಾಸ್ತ್ರ ಅಧ್ಯಯನದ ಜವಾಬ್ದಾರಿಯನ್ನು ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಗೆ  ವಹಿಸಿತ್ತು.  ಆದರೆ, ಇದನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಈ ಎಲ್ಲಾ ವಿಚಾರಗಳ ಹಿಂದೆ ಹಳೇ ಮೈಸೂರು ಪ್ರದೇಶದ ರಾಜಕೀಯ ಚಿಂತನೆ ಕೆಲಸ ಮಾಡಿದೆಯೆಂದು ಟೀಕಿಸಿದರು.

ದುರುಪಯೋಗ- ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಘಟಿಸಿ ಅಂದಾಜು ಮೂರು ತಿಂಗಳು ಸಮೀಪಿಸುತ್ತಿದ್ದರು ಇಲ್ಲಿಯವರೆಗೆ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಾರ್ಯಗಳು ನಡೆದಿಲ್ಲ. ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಹೆಸರಿನಲ್ಲಿ ವಿವಿಧೆಡೆಗಳಿಂದ ಬಂದ ನೆರವನ್ನು ದುರುಪಯೋಗಗೊಳ್ಳುತ್ತಿರುವುದಾಗಿ ನಾಚಪ್ಪ ಟೀಕಿಸಿದರು.

ಬೇಡಿಕೆಗಳು- ಸಂವಿಧಾನ ಪರಾಮರ್ಶೆ ಆಯೋಗದ ಶಿಫಾರಸ್ಸಿನಂತೆ ಸಿಎನ್‍ಸಿಯ ಒತ್ತಾಸೆ ಮತ್ತು ಪ್ರಯತ್ನದ ಮೇರೆ ಸಂವಿಧಾನದ 371 ನೇ ವಿಧಿ ಪ್ರಕಾರ ಕೊಡಗು ಅಭಿವೃದ್ಧಿ ಮಂqಳಿ ರಚನೆಯಾಗಬೇಕು, ಜಮ್ಮಾ ಭೂಮಿ ಸಂಬಂಧ 2011 ರ ಭೂ ಕಂದಾಯ ಕಾಯ್ದೆ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ  ಕ್ರಮ, ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲಿರುವ ವಿನಾಯಿಸಿ ಅಭಾದಿತವಾಗಿ ಮುಂದುವರಿಯಬೇಕು, ಕೊಡವರಿಗೆ ರಾಜಕೀಯ ಮೀಸಲಾತಿ, ಜಾಗತಿಕ ಮಾನ್ಯತೆ, ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್‍ಗೆ ಸೇರಿಸಬೇಕು, ಕಾವೇರಿಗೆ ಜೀವಂತ ಮನುಷ್ಯನ ಶಾಸನಬದ್ಧ ಸ್ಥಾನ ಮಾನ ಒದಗಿಸಬೇಕು, ಕೊಡಗಿನಲ್ಲಿ ಗೋವಧೆ ಮತ್ತು ಗೋ ಸಾಗಣೆಯನ್ನು ನಿಷೇಧಿಸಬೇಕೆಂದು ನಾಚಪ್ಪ ಆಗ್ರಹಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: